ನರೇಂದ್ರ ಮೋದಿ - ಕ್ಸಿ ಜಿನ್ ಪಿಂಗ್
ನ್ಯೂಯಾರ್ಕ್: ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಚೀನಾ ಅದ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಇದೇ ಮೊದಲ ಬಾರಿಗೆ ಅಗ್ರಸ್ಥಾನ ಪಡೆದಿದ್ದಾರೆ.
ಚಿನ್ ಪಿಂಗ್ ಅವರು ಮೊದಲ ಸ್ಥಾನದಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹಿಂದಿಕ್ಕಿ ಈ ಬಾರಿ ಮೊದಲ ಸ್ಥಾನ ಪಡೆದಿದ್ದಾರೆ. ಪುಟಿನ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಫೋರ್ಬ್ಸ್ ಬಿಡುಗಡೆ ಮಾಡಿರುವ 2018ನೇ ಸಾಲಿನ 75 ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 9ನೇ ಸ್ಥಾನ ಪಡೆದಿದ್ದಾರೆ.
ಮೋದಿ ನಂತರದ ಸ್ಥಾನದಲ್ಲಿ ಪೇಸ್ ಬುಕ್ ಸಿಇಓ ಮಾರ್ಕ್ ಝುಕರ್‌ಬರ್ಗ್ (13), ಬ್ರಿಟನ್ ಪ್ರಧಾನಿ ತೆರೇಸಾ ಮೇ (14), ಚೀನೀ ಪ್ರಧಾನಿ ಲೀ ಕೆಕಿಯಾಂಗ್ (15), ಆ್ಯಪಲ್ ಸಿಇಓ ಟಿಂ ಕುಕ್ (24) ಇದ್ದಾರೆ.
'ಈ ಭೂಮಿ ಮೇಲೆ 7.5 ಶತಕೋಟಿ ಜನರು ಇದ್ದಾರೆ; ಇವರಲ್ಲಿ ವಿಶ್ವವನ್ನೇ ಬದಲಿಸಬಲ್ಲ 75 ಅತ್ಯಂತ ಪ್ರಭಾವಿ ಪುರುಷರು ಹಾಗೂ ಮಹಿಳೆಯರನ್ನು ನಾವು ಗುರುತಿಸಿದ್ದೇವೆ. ಪ್ರತಿ ನೂರು ದಶಲಕ್ಷ ಜನರಲ್ಲಿ ಒಬ್ಬರಂತೆ ಈ 75 ಮಂದಿಯನ್ನು ನಾವು ಗುರುತಿಸಿದ್ದೇವೆ. ನಾವಿರುವ ಈ ಜಗತ್ತಿಗೆ ಈ 75 ಪ್ರಭಾವಿಗಳು ಅತ್ಯಂತ ಮಹತ್ವಪೂರ್ಣ ವ್ಯಕ್ತಿಗಳಾಗಿದ್ದಾರೆ' ಎಂದು ಫೋರ್ಬ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.