ಬೀಜಿಂಗ್: ಚೀನಾದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಭಾನುವಾರ ಸಾಗರ ಪರೀಕ್ಷೆಯನ್ನು ಆರಂಭಿಸಿದೆ. ದೇಶದ ಮಿಲಿಟರಿ ಪಡೆಯನ್ನು ಆಧುನೀಕರಣಗೊಳಿಸಲು ಇದೊಂದು ಐತಿಹಾಸಿಕ ಹೆಜ್ಜೆಯಾಗಿದ್ದು ವಿವಾದಿತ ಜಲ ಪ್ರದೇಶದಲ್ಲಿ ನೌಕಾಪಡೆ ಇರುವಿಕೆಯನ್ನು ಬಿಗಿಗೊಳಿಸಲು ಮಹತ್ವದ ಕ್ರಮವಾಗಿದೆ ಎಂದು ಚೀನಾ ದೈನಿಕ ವರದಿ ಮಾಡಿದೆ.
ಈ ವಿಮಾನವಾಹಕ ನೌಕೆ 50,000 ಮೆಟ್ರಿಕ್ ಟನ್ ತೂಕವಿದೆ. ಸ್ಥಳೀಯ ಕಾಲಮಾನ ಇಂದು ಬೆಳಗ್ಗೆ 7 ಗಂಟೆಗೆ ಹಲವು ಶಕ್ತಿಶಾಲಿ ನಾವೆಗಳ ಸಹಾಯದಿಂದ ಸಮುದ್ರಕ್ಕೆ ಬಿಡಲಾಯಿತು.
ಈ ಹಡಗು ದೇಶದ ಎರಡನೇ ವಿಮಾನವಾಹಕ ನೌಕೆಯಾಗಿದ್ದು ಚೀನಾದಲ್ಲಿ ಸಂಪೂರ್ಣವಾಗಿ ನಿರ್ಮಿಸಿ ವಿನ್ಯಾಸಗೊಳಿಸಿದ ಮೊದಲ ವಿಮಾನವಾಹಕ ನೌಕೆಯಾಗಿದೆ. ಇದು ನೌಕೆಯನ್ನು 2020ರೊಳಗೆ ಸಂಧಿಸಲಿದೆ.
ಚೀನಾದ ನೌಕಾಪಡೆಯ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸಲು ಈ ಪ್ರಯೋಗಾರ್ಥ ನೌಕಾ ಪ್ರಯೋಗ ಸಹಾಯವಾಗಲಿದೆ.
2012ರಲ್ಲಿ ಸೋವಿಯತ್ ಯೂನಿಯನ್ ನಿರ್ಮಿತ ಹಡಗು ಲಿಯನಿಂಗ್ ನಂತರ ಚೀನಾ ಹೊಸ ವಿಮಾನ ವಾಹಕ ನೌಕೆಯನ್ನು ಆರಂಭಿಸಿದೆ.ಲಿಯನಿಂಗ್ ನ್ನು ಇಂದು ಚೀನಾದಲ್ಲಿ ಸಂಶೋಧನೆ ಮತ್ತು ಹೊಸ ವಾಹಕಗಳ ಅಭಿವೃದ್ದಿಗೆ ಬಳಸಲಾಗುತ್ತದೆ.
ಚೀನಾ ಈಗಾಗಲೇ ಶಾಂಘೈಯಲ್ಲಿ ಮೂರನೇ ವಿಮಾನವಾಹಕ ನೌಕೆಯನ್ನು ನಿರ್ಮಿಸುತ್ತಿದೆ ಎಂದು ವರದಿಯೊಂದು ಹೇಳುತ್ತದೆ. 2030ರ ವೇಳೆಗೆ ನಾಲ್ಕು ವಿಮಾನವಾಹಕ ನೌಕೆಯನ್ನು ತಯಾರಿಸಲು ಚೀನಾ ದೇಶ ಯೋಜನೆ ನಡೆಸುತ್ತಿದೆ.
ವಿಶ್ವದಲ್ಲಿ ಸ್ವಂತ ವಿಮಾನವಾಹಕ ನೌಕೆಯನ್ನು ಹೊಂದಿರುವ ದೇಶಗಳಲ್ಲಿ ಭಾರತ, ಅಮೆರಿಕಾ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಥೈಲ್ಯಾಂಡ್ ಮತ್ತು ಚೀನಾಗಳು ಒಳಗೊಂಡಿದ್ದು ಒಟ್ಟು 18 ವಿಮಾನವಾಹಕ ನೌಕೆಗಳು ಕಾರ್ಯನಿರ್ವಹಿಸುತ್ತಿವೆ.
ಅಮೆರಿಕಾ ಅತಿ ದೊಡ್ಡ ವಿಮಾನವಾಹಕ ನೌಕೆಯನ್ನು ಹೊಂದಿದ್ದು ಇಲ್ಲಿ 11 ಪರಮಾಣು ಶಕ್ತಿ ವಾಹಕಗಳು ಇವೆ.