ವಾಷಿಂಗ್ಟನ್: ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ರನ್ನು ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಸಂಸ್ಥೆಯ ಷೇರುದಾರರು ಒತ್ತಾಯಿಸಿದ್ದಾರೆ.
ಕೇಂಬ್ರಿಜ್ ಅನಲಿಟಿಕಾ ಹಗರಣದಲ್ಲಿ ಫೇಸ್ ಬುಕ್ ನ ಅಪಖ್ಯಾತಿಯನ್ನು ಹೋಗಲಾಡಿಸಲು ಮತ್ತು ಪ್ರತಿ ಸ್ಪರ್ಧಿಗಳ ವಿರುದ್ಧ ಜನಾಭಿಪ್ರಾಯ ಮೂಡಿಸಲು ಜುಕರ್‌ಬರ್ಗ್ ಅವರು ಸಾರ್ವಜನಿಕ ಸಂಪರ್ಕ ಸಂಸ್ಥೆಗಳ ಜತೆ ಕೈಜೋಡಿಸಿದ್ದಾರೆ ಎಂದು ಕೆಲವು ಪತ್ರಿಕೆಗಳು ವರದಿ ಪ್ರಕಟಿಸಿದ ಬೆನ್ನಲ್ಲೇ ಷೇರುದಾರರಿಂದ ಈ ಒತ್ತಾಯ ಕೇಳಿಬಂದಿದೆ.
ಮಾರ್ಕ್ ಜುಕರ್‌ಬರ್ಗ್ ಫೇಸ್ ಬುಕ್ ವಿರುದ್ಧದ ಟೀಕೆಗಳನ್ನು ಸುಳ್ಳೆಂದು ಜರೆಯಲು ಮತ್ತು ಪ್ರತಿಸ್ಪರ್ಧಿ ಉದ್ಯಮಿ ಜಾರ್ಜ್ ಸೋರೋಸ್ ಈ ಟೀಕೆಗಳನ್ನು ಮಾಡಿಸುತ್ತಿದ್ದಾರೆ ಎಂದು ಬಿಂಬಿಸಲು ಸಾರ್ವಜನಿಕ ಸಂಪರ್ಕ ಕಂಪನಿಗಳನ್ನು ನೇಮಿಸಿಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು.
ಫೇಸ್ ಬುಕ್ ತನ್ನನ್ನು ಬಿಟ್ಟರೆ ಮತ್ಯಾರು ಇಲ್ಲ ಎಂಬಂತೆ ವರ್ತಿಸುತ್ತಿದೆ. ಅದು ನಿಜವಲ್ಲ. ಫೇಸ್ ಬುಕ್ ಒಂದು ಸಂಸ್ಥೆ, ಅದು ಸಂಸ್ಥೆಯಂತೆಯೇ ಇರಬೇಕು. ಸಿಇಒ ಮತ್ತು ಮುಖ್ಯಸ್ಥನ ಹುದ್ದೆಯಲ್ಲಿ ಒಬ್ಬರೇ ಇರಬಾರದು ಎಂದು ಫೇಸ್ ಬುಕ್ ನಲ್ಲಿನ ಎರಡನೇ ಅತ್ಯಂತ ದೊಡ್ಡ ಷೇರುದಾರ ಜೋನಸ್ ಕ್ರೋನ್ ಆಗ್ರಹಿಸಿದ್ದಾರೆ.