ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸರ್ಕಾರದ ಸಾಧನೆ ಅದ್ಭುತವಾಗಿದೆ ಎಂದು ತಾವೇ ಹೇಳಿದ್ದು, ತಮಗೆ ತಾವೇ A+ ಅಂಕಗಳನ್ನು ಕೊಟ್ಟುಕೊಂಡಿದ್ದಾರೆ.
ರಾಷ್ಟ್ರದ ಅಧ್ಯಕ್ಷನಾಗಿ ನಾನು ಅತ್ಯುತ್ತಮ ಕೆಲಸ ಮಾಡುತ್ತಿದ್ದೇನೆ.ನಮ್ಮ ಆರ್ಥಿಕತೆಯೂ ಅತ್ಯುತ್ತಮವಾಗಿದೆ ಎಂದು ಟ್ರಂಪ್ ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನನಗೆ ನಾನೇ ಅಂಕ ಕೊಟ್ಟುಕೊಳ್ಳುವುದನ್ನು ನಾನು ಇಷ್ಟಪಡುವುದಿಲ್ಲ, ಆದರೂ ನಾನು ಅಮೆರಿಕ ಅಧ್ಯಕ್ಷನಾಗಿ ಕೆಲಸ ಮಾಡುತ್ತಿರುವ ವೈಖರಿಗೆ A+ ಅಂಕ ನೀಡುತ್ತೇನೆ, ಅದಕ್ಕಿಂತಲೂ ಹೆಚ್ಚಿನ ಅಂಕ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಉತ್ತರ ಕೊರಿಯಾ ಬಗ್ಗೆಯೂ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಅಮೆರಿಕ ಆಡಳಿತ ಬಯಸಿದ್ದರೆ ಉತ್ತರ ಕೊರಿಯಾದೊಂದಿಗೆ ಕದನ ಮಾಡಬಹುದಾಗಿತ್ತು. ಆದರೆ ಹಾಗೆ ಮಾಡಲಿಲ್ಲ. ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ವೇಳೆ ಒಬಾಮ ನನಗೆ ಕೆಲವೊಂದು ಸಲಹೆ ಮಾರ್ಗದರ್ಶನಗಳನ್ನು ನೀಡಿದ್ದರು ಅಷ್ಟೇ ಅಲ್ಲದೇ ಅಮೆರಿಕ ಎದುರಿಸುತ್ತಿರುವ ಹಲವು ಸಮಸ್ಯೆಗಳಲ್ಲಿ ಉತ್ತರ ಕೊರಿಯಾ ಪ್ರಮುಖವಾದದ್ದು ಎಂದೂ ಹೇಳಿದ್ದರು. ಉತ್ತರ ಕೊರಿಯಾ ಬಗ್ಗೆ ನಾನು ಮತ್ತು ಒಬಾಮ ಕುಳಿತು ಮಾತನಾಡಿದ್ದೆವು. ಆ ನಂತರದ ದಿನಗಳಲ್ಲಿ ಉತ್ತರ ಕೊರಿಯಾ ವಿಷಯವನ್ನು ನಾವು ನಿರ್ವಹಣೆ ಮಾಡಿದ ರೀತಿ ನನಗೆ ಸಮಾಧಾನಕರವಾಗಿದೆ ಎಂದು ಟ್ರಂಪ್ ಸಂದರ್ಶನದಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics