ಗ್ವಾಟೆಮಾಲ: ಕಳೆದ ವರ್ಷ ಸುಮಾರು 200 ಜನ ಮರಣ ಮೃದಂಗಕ್ಕೆ ಕಾರಣವಾಗಿದ್ದ ಫ್ಯುಗೋ ಅಗ್ನಿಪರ್ವತ ಮತ್ತೆ ಸ್ಫೋಟಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸೋಮವಾರ ಬೆಳಗ್ಗೆ ಫ್ಯುಗೋ ಅಗ್ನಿ ಪರ್ವತ ಸ್ಫೋಟಗೊಂಡಿದ್ದು, ಪರಿಣಾಮ ಭಾರಿ ಪ್ರಮಾಣದ ಲಾವಾರಸ ಹೊರ ಬಂದಿದೆ. ಹೀಗಾಗಿ ಸ್ಥಳೀಯ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿದೆ. ಮುಂಜಾಗ್ರತಾ ಕ್ರಮವಾಗಿ ಸೋಮವಾರ ಒಂದೇ ದಿನ ಬರೊಬ್ಬರಿ ನಾಲ್ಕು ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಆತಂಕ ಬೇಡ, ಜ್ವಾಲಾಮುಖಿ ಪ್ರಭಾವ ಕಡಿಮೆ: ತಜ್ಞರು
ಇನ್ನು ಪ್ರಸ್ತುತ ಸ್ಫೋಟಿಸಿರುವ ಫ್ಯುಗೋ ಅಗ್ನಿ ಪರ್ವತದಿಂದ ಸಿಡಿದಿರುವ ಜ್ವಾಲಾಮುಖಿಗೆ ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಜ್ವಾಲಾಮುಖಿಯ ಚಲನಾ ವೇಗ ಕಡಿಮೆ ಇದ್ದು, ಜನರ ಆತಂಕ ಪಡುವ ಆಗತ್ಯವಿಲ್ಲ. ಆದರೆ ಹೊಗೆ ಮತ್ತು ಧೂಳು ನಿರಂತರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಭವಿಸಿದ್ದ ಭೀಕರ ಜ್ವಾಲಾಮುಖಿ ಸ್ಫೋಟದಿಂದಾಗಿ ಕನಿಷ್ಛ 200 ಮಂದಿ ಸಾವನ್ನಪ್ಪಿ, 235 ಮಂದಿ ನಾಪತ್ತೆಯಾಗಿದ್ದರು. ಸಾವಿರಾರು ಮಂದಿ ನೆಲೆ ಕಳೆದುಕೊಂಡು ಸಂತ್ರಸ್ಥರಾಗಿದ್ದರು.