ವಾಷಿಂಗ್ಟನ್: 26/11 ಮುಂಬೈ ದಾಳಿಗೆ 10 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಭಾರತಕ್ಕೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಭಯೋತ್ಪಾದನೆ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದು ಅಮೆರಿಕ ಘೋಷಣೆ ಮಾಡಿದೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಟ್ವಿಟರ್ ನಲ್ಲಿ ಮುಂಬೈ ದಾಳಿ ವೇಳೆ ಮೃತರಾದವರಿಗೆ ಶಾಂತಿ ಕೋರಿದ್ದಾರೆ.
'ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ನಾವು ಭಾರತೀಯರ ಪರವಾಗಿ ನಿಲ್ಲುತ್ತೇವೆ. ಮುಂಬೈ ದಾಳಿಗೆ 10 ವರ್ಷಗಳಾಗಿವೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಭಾರತೀಯರ ಪರ ನಾವಿದ್ದೇವೆ. ಈ ದಾಳಿಯಲ್ಲಿ 6 ಅಮೆರಿಕ ಪ್ರಜೆಗಳೂ ಸೇರಿದಂತೆ 166 ಮಂದಿ ಮೃತಪಟ್ಟಿದ್ದರು. ಭಯೋತ್ಪಾದನೆ ಗೆಲ್ಲಲು ಅಥವಾ ಗೆಲುವಿನ ಸಮೀಪ ಬರಲು ನಾವು ಬಿಡುವುದಿಲ್ಲ' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಮುಂಬೈ ದಾಳಿಗೆ ಕಾರಣರಾದವರ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಬಹುಮಾನ ನೀಡುವುದಾಗಿ ಅಮೆರಿಕದ ಶ್ವೇತ ಭವನ ತಿಳಿಸಿತ್ತು. ಈ ಮೊದಲು ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯ್ಯೀದ್ ಮೊಹಮದ್ ನ ಬಗ್ಗೆ ಮಾಹಿತಿ ನೀಡಿದರೆ 70 ಕೋಟಿ ರೂ. ಹಾಗೂ ಇದೇ ಉಗ್ರ ಸಂಘಟನೆಯ ಮತ್ತೋರ್ವ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿ ಬಗ್ಗೆ ಮಾಹಿತಿ ಕೊಟ್ಟರೆ 14 ಕೋಟಿ ರೂ. ಬಹುಮಾನ ನೀಡುವುದಾಗಿ ಅಮೆರಿಕ ಈ ಮೊದಲು ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.