ವಿದೇಶ

ಚೀನಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಿ; ಜನರಲ್ ಮೋಟಾರ್ಸ್ ಗೆ ಡೊನಾಲ್ಡ್ ಟ್ರಂಪ್ ಮನವಿ

Sumana Upadhyaya

ವಾಷಿಂಗ್ಟನ್: ಚೀನಾದಲ್ಲಿ ಕಾರು ಉತ್ಪಾದನೆಯನ್ನು ನಿಲ್ಲಿಸುವಂತೆ ಜನರಲ್ ಮೋಟಾರ್ಸ್ ಕಂಪೆನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಅಮೆರಿಕಾ ಮೂಲದ ಆಟೊಮೊಬೈಲ್ ಕಂಪೆನಿಯಾಗಿರುವ ಜನರಲ್ ಮೋಟಾರ್ಸ್ ಅಮೆರಿಕಾ ಮತ್ತು ಕೆನಡಾಗಳಲ್ಲಿ ಸುಮಾರು 14 ಸಾವಿರದ 800 ಉದ್ಯೋಗಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂದು ಘೋಷಿಸಿತ್ತು.

ಉದ್ಯೋಗ ಕಡಿತಗೊಳಿಸಿದರೆ 2020ರ ಅಂತ್ಯಕ್ಕೆ ಸುಮಾರು 4.5 ಬಿಲಿಯನ್ ಡಾಲರ್ ಮೊತ್ತವನ್ನು ಉಳಿತಾಯ ಮಾಡಲು ಸಾಧ್ಯವಿದೆ ಎಂದು ಜನರಲ್ ಮೋಟಾರ್ಸ್ ಹೇಳಿದ್ದು, ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಟ್ರಂಪ್ ಹೇಳಿದ್ದಾರೆ ಎನ್ನಲಾಗಿದೆ.
ಕಂಪೆನಿಯ ಈ ನಿರ್ಧಾರದಿಂದ ಅಮೆರಿಕಾದ ಒಹಿಯೊ ಮತ್ತು ಮಿಚಿಗನ್ ರಾಜ್ಯಗಳ ಜನರ ಉದ್ಯೋಗದ ಮೇಲೆ ತೀವ್ರ ಪರಿಣಾಮ ಬೀರಲಿದೆ.

ಚೀನಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಿ ಒಹಿಯೊದಲ್ಲಿ ಹೊಸ ಘಟಕ ಸ್ಥಾಪಿಸಿ ಇಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ನೀಡಬೇಕೆಂದು ಡೊನಾಲ್ಡ್ ಟ್ರಂಪ್ ಅವರು ಜನರಲ್ ಮೋಟಾರ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇರಿ ಬರ್ರ ಅವರಿಗೆ ತಿಳಿಸಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಇದಕ್ಕೂ ಮುನ್ನ ಶ್ವೇತ ಭವನದಲ್ಲಿ ಹೇಳಿಕೆ ನೀಡಿದ್ದ ಅಧ್ಯಕ್ಷ ಟ್ರಂಪ್ ಜನರಲ್ ಮೋಟಾರ್ಸ್ ನ ತೀರ್ಮಾನ ತಮಗೆ ಹಿಡಿಸಲಿಲ್ಲ ಎಂದಿದ್ದರು.

SCROLL FOR NEXT