ಚೀನಾ ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ
ಬೀಜಿಂಗ್: ಚೀನಾದ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ನಡೆದ ಭೀಕರ ಸ್ಫೋಟದಲ್ಲಿ ಕನಿಷ್ಠ 22 ಮಂದಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಉತ್ತರ ಚೀನಾದ ಝಾಂಗ್ಜಿಕೌ ನಗರದಲ್ಲಿರುವ ಹೆಬಿ ಷೆನ್ಘುವಾ ಕೆಮಿಕಲ್ ಕಂಪನಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಛ 22 ಮಂದಿ ಸಾವಿಗೀಡಾಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ಕಾರ್ಖಾನೆಯಲ್ಲಿದ್ದು ಸುಮಾರು 50ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಟ್ರಕ್ ಗಳು ಬೆಂಕಿಗಾಹುತಿಯಾಗಿದ್ದು, ಕಾರ್ಖಾನೆಯಲ್ಲಿ ಅಪಾರ ಪ್ರಮಾಣದ ರಾಸಾಯನಿಕಗಳು ಬೆಂಕಿಗಾಹುತಿಯಾಗಿದೆ. ಇನ್ನು ದುರ್ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಉಂಟಾದ ಅಗ್ನಿ ಅವಘಡವೇ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ.
ಸ್ಫೋಟದ ರಭಸಕ್ಕೆ ಕಾರ್ಖಾನೆಯ ಕೆಲ ಗೋಡೆಗಳೂ ಕೂಡ ಬಿರುಕುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.