ವಿದೇಶ

ವಿಪಕ್ಷಗಳ ಕೈ ಬಲಪಡಿಸಿದ ಪಾಕ್ ಉಪ ಚುನಾವಣೆ, ಇಮ್ರಾನ್ ಖಾನ್ ಪಕ್ಷಕ್ಕೆ 2 ಸ್ಥಾನ ನಷ್ಟ!

Srinivasamurthy VN
ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಆಧಿಕಾರಕ್ಕೇರಿರುವ ಇಮ್ರಾನ್ ಖಾನ್ ನೇತೃತ್ವದ ಪಕ್ಷಕ್ಕೆ ಮೊದಲ ಆಘಾತ ಎದುರಾಗಿದ್ದು, ಉಪ ಚುನಾವಣೆಯಲ್ಲಿ ಪಿಟಿಐ ಪಕ್ಷ 2 ಸ್ಥಾನ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿದೆ.
ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಪಕ್ಷ ತನ್ನ ಸಂಖ್ಯಾ ಬಲವನ್ನು ಬಲಪಡಿಸಿಕೊಂಡಿದ್ದು, ಇಮ್ರಾನ್ ಖಾನ್ ಅವರು ಪ್ರಧಾನಿಯಾದ ಬಳಿಕ ತೆರವಾಗಿದ್ದ ಎರಡೂ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆ ಮೂಲಕ ಪಾಕಿಸ್ತಾನದಲ್ಲಿ ವಿಪಕ್ಷಗಳ ಕೈ ಬಲಪಡಿಸಿದಂತಾಗಿದೆ. 
ಈ ಹಿಂದೆ ಇಮ್ರಾನ್ ಖಾನ್ ಪ್ರತಿನಿಧಿಸಿದ್ದ ಲಾಹೋರ್ ಕ್ಷೇತ್ರದಲ್ಲಿ ಪಿಎಂಎಲ್ ಎನ್ ಪಕ್ಷದ ಮಾಜಿ ಅಧ್ಯಕ್ಷ ಶಾಹಿದ್ ಖಖಾನ್ ಅಬ್ಬಾಸಿ ಗೆಲುವು ಸಾಧಿಸಿದ್ದು, ಮತ್ತೊಂದು ಬನ್ನು ಕ್ಷೇತ್ರದಲ್ಲಿ ಮುತಾಹಿದಾ ಮಜ್ಲಿಸ್ ಅಮಲ್ ಪಕ್ಷದ ಜಾಹಿದ್ ಅಕ್ರಮ್ ದುರ್ರಾನಿ ಗೆಲುವು ಸಾಧಿಸಿದ್ದಾರೆ. 
ಒಟ್ಟು 11ರಾಷ್ಟ್ರೀಯ ಅಸೆಂಬ್ಲಿ ಕ್ಷೇತ್ರಗಳಿಗೆ ಮತ್ತು 24 ಪ್ರಾಂತೀಯ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದ್ದು, ಇಮ್ರಾನ್ ಖಾನ್ ಪಕ್ಷಕ್ಕೆ ಪಿಎಂಎಲ್ ಎನ್ ತೀವ್ರ ಪೈಪೋಟಿ ನೀಡಿದೆ. ಪ್ರಾಂತೀಯ ಚುನಾವಣೆ ನಡೆದ 24 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಮಾತ್ರ ಪಿಟಿಐ ಗೆಲುವು ಸಾಧಿಸಿದ್ದು, ಪಿಪಿಪಿ, ಪಿಎಂಎಲ್ ಎನ್ ನೇತೃತ್ವದ ವಿಪಕ್ಷಗಳ ಒಕ್ಕೂಟ 13 ಕ್ಷೇತ್ರದಲ್ಲಿ ಜಯಭೇರಿ ಭಾರಿಸಿವೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ಕ್ವಾಯ್ಡ್ ಮತ್ತು ಮಜ್ಲಿಸ್ ಅಮಲ್ ಪಕ್ಷಗಳು ತಲಾ 1 ಕ್ಷೇತ್ರದಲ್ಲಿ ಗೆಲುವು ಸಾದಿಸಿದ್ದರೆ, ಪಿಎಂಎಲ್ ಎನ್ 7 ಮತ್ತು ಪಿಪಿಪಿ 2 ಕ್ಷೇತ್ರಗಳಲ್ಲಿ ಜಯ ಸಾದಿಸಿವೆ. ಉಳಿದಂತೆ ಪಕ್ಷೇತರ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇನ್ನು ಹಾಲಿ ಚುನಾವಣಾ ಫಲಿತಾಂಶದಿಂದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಇಲ್ಲ. ಆದರೆ ವಿಪಕ್ಷಗಳ ಕೈ ಬಲವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
SCROLL FOR NEXT