ವಿದೇಶ

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್ ನಿಧನ

Srinivasamurthy VN
ಸ್ಯಾನ್ ಫ್ರಾನ್ಸಿಸ್ಕೋ: ಖ್ಯಾತ ಕಂಪ್ಯೂಟರ್ ತಂತ್ರಜ್ಞಾನ ತಯಾರಿಕಾ ಸಂಸ್ಥೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಲೆನ್ ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಬಿಳಿ ರಕ್ತಕಣಗಳನ್ನು ಕೊಲ್ಲುವ ಮಾರಕ ಕ್ಯಾನ್ಸರ್ ಗೆ ಅಲೆನ್ ತುತ್ತಾಗಿದ್ದರು. ಕಳೆದ ಸುಮಾರು 6 ವರ್ಷಗಳಿಂದ ಅವರು ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ವಿಧಿವಶರಾಗಿದ್ದಾರೆ.
1970ರಲ್ಲಿ ವಿಶ್ವದ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಅವರೊಂದಿಗೆ ಸೇರಿ ಖ್ಯಾತ ತಂತ್ರಾಂಶ ಸಂಸ್ಥೆ ಮೈಕ್ರೋಸಾಫ್ಟ್ ಅನ್ನು ಪಾಲ್ ಅಲೆನ್ ಹುಟ್ಟುಹಾಕಿದ್ದರು. ಬಳಿಕ ಮೈಕ್ರೋಸಾಫ್ಟ್ ವಿಶ್ವದ ದೈತ್ಯ ತಂತ್ರಾಂಶ ತಯಾರಿಕಾ ಸಂಸ್ಥೆಯಾಗಿ ಬೆಳೆದಿದೆ. ಇಂದು ಪಾಲ್ ಅಲೆನ್ ಮತ್ತು ಬಿಲ್ ಗೇಟ್ಸ್ ವಿಶ್ವದ ಶ್ರೀಮಂತ ಗಣ್ಯರ ಪಟ್ಟಿಯಲ್ಲಿ ಅಗ್ರಮಾನ್ಯರಾಗಿದ್ದಾರೆ.
ಇನ್ನು ಪಾಲ್ ಅಲೆನ್ ನಿಧನಕ್ಕೆ ವಿಶ್ವದ ಖ್ಯಾತನಾಮ ಉದ್ಯಮಿಗಳು, ಹಾಲಿವುಡ್ ನಟರು ಮತ್ತು ತಂತ್ರಜ್ಞಾನ ಲೋಕದ ತಜ್ಞರು ಕಂಬನಿ ಮಿಡಿದಿದ್ದಾರೆ.
SCROLL FOR NEXT