ನವದೆಹಲಿ: ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು, ನಿಮ್ಮಲ್ಲಿರುವ ಸಮಸ್ಯೆಗಳತ್ತ ಗಮನಹರಿಸಿ, ಮೊದಲು ಭಯೋತ್ಪಾದನೆಗೆ ಅಂತ್ಯ ಹಾಡಿ ಎಂದು ಪಾಕಿಸ್ತಾನಕ್ಕೆ ಮಂಗಳವಾರ ಭಾರತ ತಿರುಗೇಟು ನೀಡಿದೆ.
ಕಾಶ್ಮೀರ ಕುರಿತಂತೆ ನಿನ್ನೆಯಷ್ಟೇ ಟ್ವೀಟ್ ಮಾಡಿದ್ದ ಇಮ್ರಾನ್ ಖಾನ್ ಅವರು ಕಾಶ್ಮೀರದಲ್ಲಿ ಅಮಾಯಕರನ್ನು ಹತ್ಯೆಗೈವ ಹೊಸ ಆವರ್ತನವನ್ನು ಭಾರತ ಆರಂಭಿಸಿದೆ ಎಂದು ಹೇಳುವ ಮೂಲಕ ಭಾರತವನ್ನು ಕೆರಳುವ ಯತ್ನ ಮಾಡಿದ್ದರು.
ಕಾಶ್ಮೀರ ಸಮಸ್ಯೆ ಮತ್ತು ಕಾಶ್ಮೀರ ಜನರ ಆಶೋತ್ತರಗಳನ್ನು ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಮಾತುಕತೆ ಮೂಲಕವೇ ಇತ್ಯರ್ಥಪಡಿಸಲು ಸಾಧ್ಯ, ಬನ್ನಿ ಮಾತುಕತೆ ಆರಂಭಿಸೋಣ ಎಂದು ಹೇಳಿದ್ದರು.
ಇಮ್ರಾನ್ ಖಾನ್ ಅವರ ಈ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನ ಪ್ರಧಾನಮಂತ್ರಿಗಳ ಹೇಳಿಕೆ ವಿಷಾದಕರವಾದದ್ದು. ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವ ಬದಲು ಪಾಕಿಸ್ತಾನ ನಾಯಕರು ಮೊದಲು ತಮ್ಮ ದೇಶದಲ್ಲಿರುವ ಸಮಸ್ಯೆಗಳತ್ತ ಗಮನಹರಿಸಬೇಕೆಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಹೇಳಿದ್ದಾರೆ.
ಭಾರತ ಹಾಗೂ ಇತರೆ ನೆರೆರಾಷ್ಟ್ರಗಳಲ್ಲಿ ಭಯೋತ್ಪಾದಕರ ಚಟುವಟಿಕೆಗಳನ್ನು ಹೆಚ್ಚಿಸುವ ಬದಲು ತನ್ನ ನಾಗರೀಕರ ಹಿತಾಸಕ್ತಿಗನುಗುಣವಾಗಿ ಭಯೋತ್ಪಾದನೆಗೆ ಬೆಂಬಲ ನೀಡುವ ಬದಲು, ಅದರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ಒಂದೆಡೆ ಭಯೋತ್ಪಾದನೆಗೆ ಹಾಗೂ ಹಿಂಸಾಚಾರಕ್ಕೆ ಬೆಂಬಲ ನೀಡಿ, ಮತ್ತೊಂದೆಡೆ ಮಾತುಕತೆ ಕುರಿತಂತೆ ಮಾತನಾಡುವ ಪಾಕಿಸ್ತಾನದ ಮತ್ತೊಂದು ಮುಖ ಇಡೀ ವಿಶ್ವದ ಮುಂದೆ ಬಹಿರಂಗಗೊಂಡಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics