ವಿದೇಶ

ಐದು ಕೋಟಿ ಫೇಸ್ ಬುಕ್‌ ಖಾತೆಗಳು ಹ್ಯಾಕ್‌?: ಪಾಸ್ ವರ್ಡ್ ಬದಲಿಸುವ ಅಗತ್ಯವಿಲ್ಲ ಎಂದ ಜುಕರ್ ಬರ್ಗ್!

Srinivasamurthy VN
ನವದೆಹಲಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಸುಮಾರು 5 ಕೋಟಿಗೂ ಅಧಿಕ ಬಳಕೆದಾರರ ಖಾತೆಗಳು ಹ್ಯಾಕ್ ಆಗಿರುವ ಸಾಧ್ಯತೆಗಳಿವೆ ಎಂಬ ಸುದ್ದಿ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಪಾಸ್ ವರ್ಡ್ ಗಳ ಬದಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಖುದ್ದು ಫೇಸ್ ಬುಕ್ ಸಂಸ್ಥೆ ಹೇಳಿಕೆ ನೀಡಿದ್ದು, ಸುಮಾರು ಐದು ಕೋಟಿಗೂ ಅಧಿಕ ಬಳಕೆದಾರರ ಖಾತೆಗಳಲ್ಲಿ ಭದ್ರತಾ ಸಮಸ್ಯೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿಕೆ ನೀಡಿದೆ. 
ಈ ಬಗ್ಗೆ ಫೇಸ್ ಬುಕ್ ಸಂಸ್ಥೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದು, 'ಫೇಸ್‌ಬುಕ್‌ನ 'ವ್ಯೂವ್‌ ಆ್ಯಸ್‌' ಎಂಬ ಫೀಚರ್‌ ಅನ್ನು ಹ್ಯಾಕರ್‌ಗಳು ಕದ್ದಿರುವ ಶಂಕೆ ಇದೆ. ಇದರಿಂದ ಹ್ಯಾಕರ್ ಗಳು ಸುಲಭವಾಗಿ ಜನರ ಖಾತೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದು. ಈಗ ತಾನೇ ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ಫೇಸ್‌ಬುಕ್‌ ಖಾತೆಗಳು ದುರುಪಯೋಗವಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ಅಂತೆಯೇ ಇದೇ ವಿಚಾರವಾಗಿ ಫೇಸ್ ಬುಕ್ ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೂಡ ಆತಂಕ ವ್ಯಕ್ತಪಡಿಸಿದ್ದು, ಬಳಕೆದಾರರು ತಮ್ಮ ಪ್ರೊಫೈಲ್‌ ಇತರರಿಗೆ ಹೇಗೆ ಕಾಣಲಿದೆ ಎಂಬುದನ್ನು ವೀಕ್ಷಿಸಲು 'ವ್ಯೂವ್‌ ಆ್ಯಸ್‌' ಫೀಚರ್‌ ಇದೆ. ಆದರೆ ಇದನ್ನು ಹ್ಯಾಕ್ ಮಾಡಿರುವ ಶಂಕೆ ಇದೆ. ಆದರೆ ಬಳಕೆದಾರರು ಆತಂಕ ಪಡುವ ಅಗತ್ಯವಿಲ್ಲ. ಖಾತೆಯ ಪಾಸ್ ವರ್ಡ್ ಗಳನ್ನೂ ಬದಲಿಸುವ ಅಗತ್ಯವಿಲ್ಲ ಎಂದು ಜುಕರ್ ಬರ್ಗ್ ಹೇಳಿದ್ದಾರೆ.
ಇದೇ ವೇಳೆ ತಾವು ಈ ಸಂಬಂಧ ಎಫ್ ಬಿಐ ನಿರಂತರ ಸಂಪರ್ಕದಲ್ಲಿದ್ದು, ಹ್ಯಾಕರ್ ಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಅಂತೆಯೇ ಭದ್ರತಾ ಲೋಪದ ಕುರಿತು ಸಂಸ್ಥೆಯಲ್ಲೇ ಆಂತರಿಕ ತನಿಖೆ ಕೂಡ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
SCROLL FOR NEXT