ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್
ವಿಶ್ವಸಂಸ್ಥೆ: ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚಳಿ ಬಿಡಿಸಿದ್ದು, ಪಾಕಿಸ್ತಾನವನ್ನು ಕೊಲೆಗಾರರನ್ನು ವೈಭವೀಕರಿಸುವ ಮತ್ತು ಭಯೋತ್ಪಾದನೆ ಮೂಲಕ ಅಮಾಯಕರ ಬಲಿ ಪಡೆಯುವ ದೇಶ ಎಂದು ಟೀಕಿಸಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯ 73ನೇ ಅಧಿವೇಶನದಲ್ಲಿ ಮಾತನಾಡಿದ ಅವರು, 'ಕೊಲೆಗಾರರನ್ನು ವೈಭವೀಕರಿಸುವ ಮತ್ತು ಭಯೋತ್ಪಾದಕ ದಾಳಿ ಮೂಲಕ ರಕ್ತಪಾತ ನಡೆಸುವ ದೇಶದೊಂದಿಗೆ ಮಾತುಕತೆ ಸಾಧ್ಯವೇ' ಎಂದು ಪ್ರಶ್ನಿಸುವ ಮೂಲಕ ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದಾರೆ.
'ಶಾಂತಿ ಮಾತುಕತೆಗೆ ಭಾರತ ಒಪ್ಪುತ್ತಿಲ್ಲ ಎಂದು ಪಾಕಿಸ್ತಾನ ಸುಳ್ಳು ಹೇಳುತ್ತಿದೆ. ಆ ದೇಶ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಕಾರಣದಿಂದಲೇ ನಾವು ಮಾತುಕತೆಯ ಪ್ರಯತ್ನಗಳನ್ನು ಸ್ಥಗಿತಗೊಳಿಸಿದ್ದೇವೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಗೂ ಮುನ್ನ, ಉಭಯ ದೇಶಗಳ ವಿದೇಶಾಂಗ ಸಚಿವರ ಸಭೆ ನಡೆಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಭಾರತ ಈ ಪ್ರಸ್ತಾವವನ್ನು ಒಪ್ಪಿದ ಕೆಲವೇ ಗಂಟೆಗಳಲ್ಲಿ ಉಗ್ರರು ಭಾರತೀಯ ಯೋಧರನ್ನು ಹತ್ಯೆಮಾಡಿದ ಸುದ್ದಿ ಬಂತು. ಪರಿಸ್ಥಿತಿ ಹೀಗಿರುವಾಗ ಮಾತುಕತೆ ನಡೆಸಲು ಸಾಧ್ಯವೇ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರಿಗೆ ಸುಷ್ಮಾ ಸ್ವರಾಜ್ ಪ್ರಶ್ನಿಸಿದರು.
ಅಂತೆಯೇ ಪಾಕಿಸ್ತಾನವು ಭಯೋತ್ಪಾದನೆಯನ್ನೇ ತನ್ನ ರಾಜಕೀಯ ನೀತಿಯನ್ನಾಗಿಸಿಕೊಂಡಿದೆ ಎಂದು ಟೀಕಿಸಿದ ಸುಷ್ಮಾ, ಪಾಕಿಸ್ತಾನ ಭಯೋತ್ಪಾದನೆ ಉತ್ಪಾದಿಸಿ, ರಫ್ತು ಮಾಡುವ ರಾಷ್ಟ್ರ ಎಂದರು. ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಪಾಕಿಸ್ತಾನದ ಪ್ರತಿನಿಧಿಗಳು ಕಳೆದ ವರ್ಷ ನಕಲಿ ಫೋಟೋಗಳನ್ನು ತೋರಿಸಿ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಲೇ ಇದೆ. ಪಾಕಿಸ್ತಾನದ ಇಬ್ಬಗೆ ನೀತಿಯಿಂದ ಶಾಂತಿ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಎಂಥಾ ಕಷ್ಟಕರ ಪರಿಸ್ಥಿತಿಯಲ್ಲೂ ಶಾಂತಿ ಮಾತುಕತೆಗೆ ಭಾರತ ಸಿದ್ಧವಾಗಿದೆ. ನಾವು ಎಂದೂ ಶಾಂತಿ ಮಾತುಕತೆಯನ್ನು ತಿರಸ್ಕರಿಸಿಲ್ಲ, ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮುಂದಿಟ್ಟ ಹೆಜ್ಜೆ ಹಿಂದಿಟ್ಟಿಲ್ಲ ಎಂದರು.
ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ಗಡಿ ಭಾಗದಲ್ಲಿ ಶಾಂತಿ ನೆಲೆಸಲು ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಸುಷ್ಮಾ ಸ್ವರಾಜ್ ತಿಳಿಸಿದರು.
ಈ ನಡುವೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡುವ ಬಗ್ಗೆ ಪ್ರಸ್ತಾವನೆ ಬಂದರೆ ಅಮೆರಿಕ ಬೆಂಬಲಿಸಲಿದೆ ಎಂದು ಟ್ರಂಪ್ ಸರ್ಕಾರ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics