ಕೊಲಂಬೋ: 359 ಮಂದಿಯ ಮಾರಣ ಹೋಮಕ್ಕೆ ಕಾರಣವಾಗಿದ್ದ ಶ್ರೀಲಂಕಾ ಉಗ್ರ ದಾಳಿಯ ಕುರಿತು ತನಿಖೆ ಮುಂದುವರೆದಿರುವಂತೆಯೇ ದಿನಕ್ಕೊಂದು ಸ್ಫೋಟಕ ಸತ್ಯ ಹೊರ ಬರಲಾರಂಭಿಸಿವೆ.
ಕಳೆದ ಈಸ್ಟರ್ ಸಂಡೇಯಂದು ಕೊಲಂಬೋದ ನಾಲ್ಕು ಚರ್ಚ್ ಗಳು ಖಾಸಗಿ ಹೊಟೆಲ್ ಗಳ ಮೇಲೆ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದರು. ಈ ವೇಳೆ ಶಾಂಗ್ರಿಲಾ ಹೊಟೆಲ್ ನಲ್ಲಿ ಆತ್ಮಹತ್ಯಾ ದಾಳಿ ನಡೆಸಿ ನೂರಾರು ಮಂದಿಯನ್ನು ಕೊಂದು ಹಾಕಿದ್ದ ಉಗ್ರನನ್ನು ಇನ್ಶಾಫ್ ಅಹ್ಮದ್ ಇಬ್ರಾಹಿಂ ಎಂದು ಗುರಿತಿಸಲಾಗಿದ್ದು, ಹೊಟೆಲ್ ನಲ್ಲಿದ್ದ ಸಿಸಿಟಿವಿ ವಿಡಿಯೋಗಳನ್ನು ಆಧರಿಸಿ ಪೊಲೀಸರು ಈ ಮಾಹಿತಿ ನೀಡಿದ್ದಾರೆ.
ಇನ್ಶಾಫ್ ಅಹ್ಮದ್ ಇಬ್ರಾಹಿಂ ಕುಟುಂಬ ಕೊಲಂಬೋದ ಶ್ರೀಮಂತ ಮುಸ್ಲಿಮ್ ಕುಟುಂಬಗಳಲ್ಲಿ ಒಂದಾಗಿದ್ದು, ಅವರ ಸಮಾಜದಲ್ಲಿ ಈ ಕುಟುಂಬ ಕೊಡುಗೈ ದಾನಿಗಳು ಎಂದೇ ಪ್ರಖಾತಿ ಪಡೆದಿತ್ತು ಎನ್ನಲಾಗಿದೆ. ಯಾರೇ ಕಷ್ಟ ಎಂದರೂ ಮೊದಲು ನೆರವಿಗೆ ಈ ಕುಟುಂಬ ಮುಂದಾಗುತ್ತಿತ್ತು. ಹೀಗಾಗಿ ಈ ಕುಟುಂಬ ಸ್ಥಳೀಯವಾಗಿ ಅತ್ಯಂತ ಖ್ಯಾತಿ ಗಳಿಸಿತ್ತು. ಉಗ್ರ ಇನ್ಶಾಫ್ ಅಹ್ಮದ್ ಇಬ್ರಾಹಿಂ ಅವರ ತಂದೆ ಮಹಮದ್ ಇಬ್ರಾಹಿಂ ಖ್ಯಾತ ಉದ್ಯಮಿಯಾಗಿದ್ದು, ಕೊಲಂಬೋದಲ್ಲಿ ತಾಮ್ರದ ವ್ಯಾಪಾರ ಮಾಡುತ್ತಿದ್ದರು. ಅಲ್ಲದೆ ಇವರು ಇಶಾನಾ ಎಕ್ಸ್ ಪೋರ್ಟ್ಸ್ ಹೆಸರಿನ ಸಂಸ್ಥೆಯನ್ನೂ ಸಹ ಹೊಂದಿದ್ದರು. ಅಲ್ಲದೆ ಇಲ್ಲಿನ ಸ್ಥಳೀಯ ಎಡಪಂಥೀಯ ಪಕ್ಷ ಜೆವಿಪಿಯೊಂದಿಗೆ ಇಬ್ರಾಹಿಂ ಗುರುತಿಸಿಕೊಂಡಿದ್ದರು. ಅವರ ಇಶಾನಾ ಎಕ್ಸ್ ಪೋರ್ಟ್ಸ್ ಸಂಸ್ಥೆಗೆ ಅವರ ಪುತ್ರ ಆತ್ಮಹತ್ಯಾ ದಾಳಿಕೋರ ಇನ್ಶಾಫ್ ಅಹ್ಮದ್ ಇಬ್ರಾಹಿಂ ನಿರ್ದೇಶಕನಾಗಿದ್ದ ಎಂದು ತಿಳಿದುಬಂದಿದೆ.
ಅಲ್ಲದೆ 2016ರಲ್ಲಿ ಇದೇ ಇನ್ಶಾಫ್ ಅಹ್ಮದ್ ಇಬ್ರಾಹಿಂ ಪ್ರಶಸ್ತಿ ಕೂಡ ಪಡೆದಿದ್ದ. ಆಸ್ಚ್ರೇಲಿಯಾ ಮೂಲದ ಖ್ಯಾತ ಆಭರಣ ತಯಾರಿಕಾ ಸಂಸ್ಥೆಯ ಮಾಲೀಕನ ಪುತ್ರಿಯನ್ನು ಈತ ವಿವಾಹವಾಗಿದ್ದ. ಬಳಿಕ ಮೂರು ವರ್ಷಗಳ ಹಿಂದೆ ಆತನ ಸಹೋದರ ಧರ್ಮದ ಹುಚ್ಚಿಗೆ ಬಿದ್ದು ಈತನನ್ನೂ ತನ್ನ ದಾರಿಗೆ ಎಳೆದುಕೊಂಡು ಹೋಗಿದ್ದ. ಆ ಬಳಿಕ ಆತನ ವರ್ತನೆಯಲ್ಲಿ ಸಾಕಷ್ಟ ಬದಲಾವಣೆಯಾಗಿತ್ತು. ಧಾರ್ಮಿಕವಾಗಿ ಆತ ಅತ್ಯಂತ ನಿಷ್ಠೂರನಾಗಿದ್ದ. ಧರ್ಮದ ವಿಚಾರ ಬಂದಾಗ ಎಲ್ಲರೊಂದಿಗೆ ನಿಷ್ಠೂರವಾಗಿ ನಡೆದುಕೊಳ್ಳುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹೊಟೆಲ್ ಸ್ಫೋಟಿಸಿದ ಅಣ್ಣ, ತನ್ನದೇ ಕುಟುಂಬವನ್ನು ಸ್ಫೋಟಿಸಿದ ತಮ್ಮ
ಇನ್ನು ಕೊಲಂಬೋ ಸರಣಿ ಬಾಂಬ್ ಸ್ಫೋಟದ ಬಳಿಕ ವಿಚಾರಣೆ ನಡೆಸಿದ್ದ ಪೊಲೀಸರು ಉಗ್ರ ಇನ್ಶಾಫ್ ಅಹ್ಮದ್ ಇಬ್ರಾಹಿಂ ಕುರಿತು ಮಾಹಿತಿ ಪಡೆದು ಆತನ ಮನೆಗೆ ವಿಚಾರಣೆಗೆ ತೆರಳಿದ್ದರಂತೆ. ಈ ವೇಳೆ ಮನೆಯಲ್ಲಿ ಅತನ ಕಿರಿಯ ಸಹೋದರ ಇಲ್ಲಾಮ್ ಮನೆಯಲ್ಲಿದ್ದ ಮತ್ತೊಂದು ಆತ್ಮಹತ್ಯಾ ಬಾಂಬ್ ಅನ್ನು ಸ್ಫೋಟಿಸಿದ್ದಾನೆ. ಈ ಸ್ಫೋಟದ ವೇಳೆ ಮನೆಯಲ್ಲಿ ಆತನ ಗರ್ಭಿಣಿ ಪತ್ನಿ ಫಾತಿಮಾ ಮತ್ತು ಮಕ್ಕಳು ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಘಟನೆಯಲ್ಲಿ ಮೂವರು ಅಧಿಕಾರಿಗಳು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬಂಗಲೆಯನ್ನೇ ಬಾಂಬ್ ತಯಾರಿಕಾ ಫ್ಯಾಕ್ಟರಿಯಾಗಿಸಿದ್ದ ಸಹೋದರರು
ಇನ್ನುಈ ಪ್ರಕರಣದ ತನಿಖೆ ನಡೆಸುತ್ತಿರುವ ಕೊಲಂಬೋ ಪೊಲೀಸರಿಗೆ ಕೊಲಂಬೋ ಹೊರವಲಯದಲ್ಲಿ ಉಗ್ರರು ಬಳಕೆ ಮಾಡುತ್ತಿದ್ದ ಬಂಗಲೆ ಪತ್ತೆಯಾಗಿದ್ದು, ಈ ಇಡೀ ಬಂಗಲೆಯನ್ನು ಉಗ್ರರು ತಮ್ಮ ಬಾಂಬ್ ತಯಾರಿಕಾ ಫ್ಯಾಕ್ಟರಿಯಾಗಿ ಬದಲಿಸಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಬೃಹತ್ ಬಂಗಲೆಯನ್ನು ಈ ಇಬ್ರಾಹಿಂ ಸಹೋದರರು ಬಾಡಿಗೆಗೆ ಪಡೆದಿದ್ದರಂತೆ. ಇಲ್ಲಿಯೇ ಇವರು ಬಾಂಬ್ ಗಳ ತಯಾರಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ ಈ ಬಂಗಲೆಯಲ್ಲಿ ಬರೊಬ್ಬರಿ 240 ಖಾಲಿಯಾದ 6 ಎಂಎಂ ಗಾತ್ರದ ಬಾಲ್ ಬೇರಿಂಗ್ ಪ್ಯಾಕೆಟ್ ಗಳು ಅಧಿಕಾರಿಗಳಿಗೆ ದೊರೆತಿದೆ. ಅಲ್ಲದೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಂಬ್ ಸ್ಫೋಟಕ್ಕೂ ಮುನ್ನ ಸುಮಾರು 90ನಿಮಿಷಗಳ ಮೊದಲು ಇಲ್ಲಿಂದ ಒಂದು ಮಿನಿ ವ್ಯಾನ್ ತೆರಳಿರುವುದು ಪತ್ತೆಯಾಗಿದೆ. ಇದೇ ವ್ಯಾನ್ ನಲ್ಲೇ ಉಗ್ರರು ಬಾಂಬ್ ತುಂಬಿದ್ದ ಬ್ಯಾಗ್ ಗಳನ್ನು ಸಾಗಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos