ವಿದೇಶ

ಭಾರತದ ವಿರುದ್ಧ ಯಾವುದೇ ಪ್ರತೀಕಾರದ ಕ್ರಮ ಬೇಡ: ಪಾಕ್ ಗೆ ಅಮೆರಿಕಾ ಸಂಸದರ ಒತ್ತಾಯ

Sumana Upadhyaya
ವಾಷಿಂಗ್ಟನ್: ಭಾರತದ ವಿರುದ್ಧ ಸೇಡಿನ ಆಕ್ರಮಣಕಾರಿ ಮನೋಧರ್ಮ ತೋರಿಸದೆ ತನ್ನ ಪ್ರಾಂತ್ಯದೊಳಗೆ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಅಮೆರಿಕಾ ಸಂಸತ್ತಿನ ಸೆನೆಟರ್ ಮತ್ತು ಕಾಂಗ್ರೆಸ್ ಸದಸ್ಯ ಒತ್ತಾಯಿಸಿದ್ದಾರೆ. 
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಭಾರತ ಸರ್ಕಾರದ ಕ್ರಮವನ್ನು ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮ ಎಂದು ಖಂಡಿಸಿರುವ ಪಾಕಿಸ್ತಾನ ನಿನ್ನೆ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಅವರನ್ನು ಉಚ್ಚಾಟಿಸಿತ್ತು.
ಈ ಬೆಳವಣಿಗೆ ಬಗ್ಗೆ ಜಂಟಿ ಹೇಳಿಕೆ ಹೊರಡಿಸಿರುವ ಅಮೆರಿಕಾದ ಸೆನೆಟರ್ ರಾಬರ್ಟ್ ಮೆನೆಂಡೆಜ್ ಮತ್ತು ಕಾಂಗ್ರೆಸ್ ಸದಸ್ಯ ಎಲಿಯಟ್ ಎಂಗಲ್ ಅವರು ಜಮ್ಮು ಮತ್ತು ಕಾಶ್ಮೀರದ ನಿರ್ಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮೆನೆಂಡೆಜ್, ಸೆನೆಟ್ ವಿದೇಶಾಂಗ ಸಂಪರ್ಕ ಸಮಿತಿಯ ರ್ಯಾಂಕಿಂಗ್ ಸದಸ್ಯರಾಗಿದ್ದು, ಏಂಜೆಲ್ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಪಾಕಿಸ್ತಾನ ಯಾವುದೇ ರೀತಿಯಲ್ಲಿಯೂ ಪ್ರತೀಕಾರದ ಆಕ್ರೋಶ ತೋರಿಸಬಾರದು, ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಒಳನುಸುಳುವಿಕೆಯನ್ನು ಸಹ ತಡೆಯಬೇಕು. ಪಾಕಿಸ್ತಾನ ಮಣ್ಣಿನಲ್ಲಿ ಭಯೋತ್ಪಾದನೆಯ ವಿಷಬೀಜ ಬಿತ್ತುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತ ತನ್ನ ಪ್ರಜೆಗಳ ಅಗತ್ಯಗಳನ್ನು ರಕ್ಷಿಸುವುದು, ಅವರಿಗೆ ಸಮಾನ ಹಕ್ಕುಗಳನ್ನು ಒದಗಿಸುವ ಅವಕಾಶವನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ ಪ್ರಾತಿನಿಧಿತ್ವದಲ್ಲಿ ಪಾರದರ್ಶಕತೆ ಕಾಪಾಡುವುದು ಮತ್ತು ರಾಜಕೀಯ ಪಾಲ್ಗೊಳ್ಳುವಿಕೆ ಬಹಳ ಮುಖ್ಯವಾದುದಾಗಿರುತ್ತದೆ. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಭಾರತ ಸರ್ಕಾರ ಈ ತತ್ವಗಳನ್ನು ಪಾಲಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
SCROLL FOR NEXT