ವಿದೇಶ

2021ರ ವೇಳೆಗೆ ಹವಾಮಾನ ವೈಪರೀತ್ಯ ತಡೆಯುವ ಗುರಿ ಸಾಧಿಸುತ್ತೇವೆ: ಫ್ರಾನ್ಸ್ ನಲ್ಲಿ ಪ್ರಧಾನಿ ಮೋದಿ

Lingaraj Badiger

ಪ್ಯಾರಿಸ್: ನಾವು 2021ರ ವೇಳೆಗೆ ಹವಾಮಾನ ವೈಪರೀತ್ಯವನ್ನು ತಡೆಯುವ ಗುರಿ ಸಾಧಿಸುತ್ತೇವೆ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಲು ಫ್ರಾನ್ಸ್ ಗೆ ತೆರಳಿರುವ ಪ್ರಧಾನಿ ಮೋದಿ ಅವರು ಇಂದು ಪ್ಯಾರಿಸ್‍ನ ಯುನೆಸ್ಕೋ ಕಚೇರಿಯಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿ, ನಾನು ಫುಟ್ಬಾಲ್ ಪ್ರಿಯರ ರಾಷ್ಟ್ರಕ್ಕೆ ಬಂದಿದ್ದೇನೆ. ಫುಟ್ಬಾಲ್‍ನಲ್ಲಿ ಪ್ರತಿ ಗೋಲ್‍ನ ಮಹತ್ವ ನಿಮಗೆ ಗೊತ್ತಿದೆ. ಅದರಂತೆ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಗುರಿಗಳನ್ನು ಈಡೇರಿಸಲು ನಮ್ಮ ಸರ್ಕಾರ ಮುಂದಾಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ 75 ದಿನಗಳಲ್ಲಿ ನಾವು ಅನೇಕ ಧೃಡ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದರು.

ಭಾರತವು ಈಗ ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಜನಾದೇಶವು ಕೇವಲ ಸರ್ಕಾರ ರಚನೆಗಾಗಿ ಅಲ್ಲ. ಅದು ಭವ್ಯ ಭಾರತ ನಿರ್ಮಾಣಕ್ಕೆ ಸಿಕ್ಕ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

1950 ಹಾಗೂ 1966ರಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತ ನೆನೆದ ಪ್ರಧಾನಿ ಮೋದಿ, ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್ ಬಾಬಾ ಅವರು ಸೇರಿದಂತೆ ವಿಮಾನ ಅಪಘಾತದಲ್ಲಿ ಮೃತಪಟ್ಟ ಎಲ್ಲರಿಗೂ ನಾನು ವಂದಿಸುತ್ತೇನೆ ಎಂದರು.

ಇದೇ ವೇಳೆ ಫ್ರಾನ್ಸ್​, ಭಾರತ ಸಂಬಂಧಕ್ಕೆ ಹೊಸ ವ್ಯಾಖ್ಯಾನ ನೀಡಿದ ಪ್ರಧಾನಿ ಮೋದಿ, ಇನ್ಫ್ರಾ ಎಂದರೆ ಇಂಡಿಯಾ ಫ್ರಾನ್ಸ್​ (INFRA: India+France). ಭಾರತ, ಫ್ರಾನ್ಸ್​ ಭಯೋತ್ಪಾನೆ ವಿರುದ್ಧ ಹೋರಾಡಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಪ್ಯಾರಿಸ್​ನಲ್ಲಿಯೂ ಗಣಪತಿ ಬಪ್ಪ ಮೋರೆಯಾ ಪಠಣ ಕೇಳಿಸಲಿದೆ ಎಂದರು.

SCROLL FOR NEXT