ವಿದೇಶ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ: ಜಪಾನ್ ಪ್ರಧಾನಿ ಭಾರತ ಪ್ರವಾಸ ರದ್ದು?

Srinivasamurthy VN

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಹಿನ್ನಲೆಯಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಭಾರತ ಪ್ರವಾಸ ರದ್ದಾಗುವ ಭೀತಿ ಎದುರಾಗಿದೆ.

ಭಾರತದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಭಾರತದ ನಿಲುವಿಗೆ ವಿಶ್ವ ಸಮುದಾಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಶಾನ್ಯ ಭಾರತದ ರಾಜ್ಯಗಳಾದ ತ್ರಿಪುರ, ಮೇಘಾಲಯ, ಅಸ್ಸಾಂನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈಗಾಗಲೇ ಪೊಲೀಸರ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವು ಗಾಯಗೊಂಡಿದ್ದಾರೆ. ಪ್ರತಿಭಟನೆ ಮುಂದುವರೆಯುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಈಶಾನ್ಯ ಭಾರತದ ರಾಜ್ಯಗಳಿಗೆ 15 ಸಾವಿರಕ್ಕೂ ಅಧಿಕ ಸೈನಿಕರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇನ್ನು ಇದೇ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಭಾರತ ಪ್ರವಾಸ ರದ್ದುಗೊಳ್ಳುವ ಭೀತಿ ಎದುರಾಗಿದೆ. ಇದೇ ಭಾನವಾರ ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟೆ ನೀಡಬೇಕಿದೆ. ಅಸ್ಸಾಂನ ಗುವಾಹತಿಯಲ್ಲಿ ಪ್ರಧಾನಿ ಮೋದಿ ಮತ್ತು ಶಿಂಜೋ ಅಬೆ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಆದರೆ ಪ್ರಸ್ತುತ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಜಪಾನ್ ಪ್ರಧಾನಿಯ ಭಾರತ ಪ್ರವಾಸವೇ ರದ್ದಾಗುವ ಸಾಧ್ಯತೆ ಇದೆ.

SCROLL FOR NEXT