ವಿದೇಶ

ಬಾಂಗ್ಲಾದೇಶದಲ್ಲಿ ಭೀಕರ ಅಗ್ನಿ ಅವಘಡ, 69 ಜನ ಸಜೀವ ದಹನ, ಹಲವರ ಸ್ಥಿತಿ ಗಂಭೀರ

Srinivasamurthy VN
ಢಾಕಾ: ಬಾಂಗ್ಲಾದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ ಕನಿಷ್ಠ 69 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 69 ಜನ ಸಜೀವ ದಹನವಾಗಿದ್ದು,15ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ನೂರಾರು ಜನರ ಮನೆಗಳು ಸುಟ್ಟು ಭಸ್ಮವಾಗಿವೆ. ಢಾಕಾದಲ್ಲಿನ ರಾಸಾಯನಿಕ ವಸ್ತುಗಳನ್ನು ತುಂಬಿಸಿಟ್ಟಿದ್ದ ಬೃಹತ್​ ಗೋಡೌನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. 4 ಅಂತಸ್ತಿನ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದ್ದು, ರಾಸಾಯನಿಕಗಳಿದ್ದ ಕಾರಣ ಬೆಂಕಿ ಅಕ್ಕಪಕ್ಕದ ನಾಲ್ಕು ಕಟ್ಟಡಗಳಿಗೂ ವ್ಯಾಪಿಸಿದೆ. ಇದರಿಂದ ಗೋಡೌನ್ ಪಕ್ಕದಲ್ಲಿದ್ದ ಅಪಾರ್ಟ್ ಮೆಂಟ್​ನಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ರಾಸಾಯನಿಕ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಸ್ಫೋಟಗೊಂಡ ಕಾರಣ ಬೆಂಕಿಯ ಕಾವು ವಿಸ್ತರಿಸುತ್ತಲೇ ಇದ್ದು, ಅದನ್ನು ಆರಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ನಿನ್ನೆ ರಾತ್ರಿ ಸುಮಾರು 11 ಗಂಟೆ ವೇಳೆಗೆ ದುರಂತ ಸಂಭವಿಸಿದ್ದು, 200ಕ್ಕೂ ಹೆಚ್ಚು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಇದುವರೆಗೂ 69 ಮೃತದೇಹಗಳು ಪತ್ತೆಯಾಗಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಕಟ್ಟಡದೊಳಗೆ ಹಲವು ಮಂದಿ ಸಿಲುಕಿದ್ದು ಅವರ ರಕ್ಷಣಾಕಾರ್ಯ ನಡೆಸಲಾಗುತ್ತಿದೆ ಎಂದು ಢಾಕಾದ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ನಿರ್ದೇಶಕ ಜುಲ್​ಫಿಕರ್​ ರೆಹಮಾನ್​ ತಿಳಿಸಿದ್ದಾರೆ.
SCROLL FOR NEXT