ಇಸ್ಲಾಮಾಬಾದ್: ಪ್ರಮುಖ ಬೆಳವಣಿಗೆಯಲ್ಲಿ ಮುಂಬೈ ಉಗ್ರ ದಾಳಿ ರೂವಾರಿ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ ನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಅಲ್ಲದೆ ಆತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದು, ಹಫೀಜ್ ಸಯ್ಯೀದ್ ಮತ್ತು ಆತನ ನೇತೃತ್ವದ ಲಷ್ಕರ್ ಸಂಘಟನೆಗಳ ವಿರುದ್ಧ ದಾಖಲಾಗಿರುವ ಸುಮಾರು 23 ಉಗ್ರ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನಿನ್ನೆಯಷ್ಟೇ ಉಗ್ರರಿಗೆ ನೆರವು ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ ಗೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಮೂಲಗಳ ಪ್ರಕಾರ ಉಗ್ರ ಹಫೀಜ್ ಸಯೀದ್ ಮತ್ತು ಆತನ ಸಹಚರರಾದ ಅಮೀರ್ ಹಮ್ಜಾ, ಮಲ್ಲಿಕ್ ಜಾಫರ್ ಮತ್ತು ಹಫೀಜ್ ಮಸೂದ್ ಗೆ ತಲಾ 50 ಸಾವಿರ ರೂಪಾಯಿ ಭದ್ರತಾ ಬಾಂಡ್ ಪಡೆದು ಕೋರ್ಟ್ ಆಗಸ್ಟ್ 31ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ. ಜೆಯುಡಿ ಸಂಘಟನೆ ಮದರಸಾ ಅಥವಾ ಧಾರ್ವಿುಕ ಕೇಂದ್ರಕ್ಕೆ ಭೂಮಿ ಯನ್ನು ಅಕ್ರಮವಾಗಿ ಉಪಯೋಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಕಳೆದ ವಾರ ಪಾಕ್ನ ಭಯೋತ್ಪಾದಕ ನಿಗ್ರಹ ದಳ ಹಫೀಜ್ ಹಾಗೂ ಇತರರ ವಿರುದ್ಧ ಉಗ್ರ ಕೃತ್ಯಗಳಿಗೆ ಹಣ ಸಹಾಯ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು.
ಉಗ್ರನ ವಿರುದ್ಧ ಡಾಸಿಯರ್ ಸಲ್ಲಿಸಿದ್ದ ಭಾರತ
ಇನ್ನುು ಉಗ್ರ ಮಸೂದ್ ಮತ್ತು ಬಾಲಾಕೋಟ್ ಉಗ್ರ ಕ್ಯಾಂಪ್ ಸೇರಿದಂತೆ ಆತನ ಉಗ್ರ ಚಟುವಟಿಕೆಗಳ ಕುರಿತ ಡಾಸಿಯರ್ ಒಂದನ್ನು ಈ ಹಿಂದೆ ಸ್ವತಃ ವಿಶ್ವಸಂಸ್ಥೆ ಸಿದ್ಧಪಡಿಸಿತ್ತು. ಇಂತಹುದೇ ಡಾಸಿಯರ್ ಒಂದನ್ನು ಇದೀಗ ಭಾರತ ಸರ್ಕಾರ ಕೂಡ ಸಿದ್ಧ ಪಡಿಸಿದ್ದು, ಈ ಡಾಸಿಯರ್ ಅನ್ನು ಪಾಕ್ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ. ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ಮತ್ತು 44 ಮಂದಿ ಯೋಧರ ಧಾರುಣ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿ ಸಂಪೂರ್ಣ ವಿವರಗಳನ್ನು ಭಾರತ ಸರ್ಕಾರ ತನ್ನ ಡಾಸಿಯರ್ ನಲ್ಲಿ ಅಳವಡಿಸಿದೆ. ಪುಲ್ವಾಮ ಉಗ್ರ ದಾಳಿಯಲ್ಲಿ ತಮಗೆ ದೊರೆತ ಸಾಕ್ಷ್ಯಾಧಾರಗಳನ್ನೂ ಕೂಡ ಡಾಸಿಯರ್ ನಲ್ಲಿ ಲಗತ್ತಿಸಿತ್ತು.
ಪುಲ್ವಾಮ ಉಗ್ರ ದಾಳಿಗೆ ಮಸೂದ್ ಅಜರ್ ನೇರ ಕೈವಾಡದ ಸಾಕ್ಷ್ಯಗಳನ್ನು ಭಾರತ ಲಗತ್ತಿಸಿದೆ ಎನ್ನಲಾಗಿದೆ. ಈ ಮಹತ್ವದ ದಾಖಲೆಯನ್ನು ಕೇಂದ್ರ ವಿದೇಶಾಂಗ ಇಲಾಖೆ ಅಧಿಕೃತವಾಗಿ ಪಾಕಿಸ್ತಾನ ಸರ್ಕಾರಕ್ಕೆ ರವಾನೆ ಮಾಡಿರುವುದರಿಂದ ಇದೀಗ ಪಾಕಿಸ್ತಾನ ಸರ್ಕಾರ ಈ ಡಾಸಿಯರ್ ಅನ್ನು ಗಂಭೀರವಾಗಿ ಪರಿಗಣಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಇದನ್ನು ಪಾಕ್ ಸರ್ಕಾರ ನಿರ್ಲಕ್ಷಿಸಿದ್ದೇ ಆದರೆ ಆಗ ಅದು ವಿಶ್ವಸಂಸ್ಥೆಯ ಮೆಟ್ಟಿಲೇರಲಿದೆ. ಈ ಭಯ ಇದೀಗ ಖಂಡಿತ ಪಾಕಿಸ್ತಾನಕ್ಕೆ ಇರಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos