ವಿದೇಶ

'ಮೋಸ್ಟ್ ನಟೋರಿಯಸ್'; ಕೊನೆಗೂ ಮುಂಬೈ ಉಗ್ರ ದಾಳಿಯನ್ನು ಖಂಡಿಸಿದ ಚೀನಾ

Srinivasamurthy VN
ಬೀಜಿಂಗ್: ಮುಂಬೈ ಉಗ್ರ ದಾಳಿ ನಡೆದು ಬರೊಬ್ಬರಿ 11 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಚೀನಾ 'ಮೋಸ್ಟ್ ನಟೋರಿಯಸ್' ಉಗ್ರ ದಾಳಿ ಎಂದು ಟೀಕಿಸಿದೆ.
ಜಾಗತಿಕ ಭಯೋತ್ಪಾದನೆ ಕುರಿತು ಶ್ವೇತಪತ್ರ ಹೊರಡಿಸಿರುವ ಬೀಜಿಂಗ್, ಕ್ಸಿಂಜಿಯಾಂಗ್ ಪ್ರಾಂತ್ಯದ ಉಗ್ರ ದಾಳಿಯೂ ಸೇರಿದಂತೆ ಜಗತ್ತಿನ ಹಲವಡೆ ನಡೆದ ಉಗ್ರ ದಾಳಿಗಳನ್ನು ಖಂಡಿಸಿದೆ. ಈ ಪೈಕಿ 200ರ ಮುಂಬೈ ಉಗ್ರ ದಾಳಿಯನ್ನು ಮೋಸ್ಟ್ ನಟೋರಿಯಸ್ ಎಂದು ಕರೆದಿರುವ ಚೀನಾ, ದಶಕಗಳಿಂದಲೂ ಜಗತ್ತಿನ ಮೂಲೆ ಮೂಲೆಗೂ ಪಸರಿಸಿರುವ ಭಯೋತ್ಪಾದನೆ ಮತ್ತು ಉಗ್ರಗಾಮಿತ್ವ ಮಾನವೀಯತೆಯ ಮೇಲಿನ ದಾಳಿ ಮಾಡುತ್ತಿದೆ ಎಂದು ಹೇಳಿದೆ.
ಅಂತೆಯೇ ಜಾಗತಿಕ ಭಯೋತ್ಪಾದನೆಯನ್ನು ಮಟ್ಟಹಾಕಲು ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ದೇಶಗಳೂ ಕೈ ಜೋಡಿಸಬೇಕು. ಶಾಂತಿ ಮತ್ತು ಅಭಿವೃದ್ಧಿಗೆ ಇವು ತೊಡಕಾಗಿದ್ದು, ಈ ಸಂಬಂಧ ವಿಶ್ವಸಂಸ್ಥೆ ಹೆಜ್ಜೆ ಇಡಬೇಕು ಎಂದು ಚೀನಾ ಹೇಳಿದೆ. ಅಂತೆಯೇ ಭಯೋತ್ಪಾದನೆ ಕುರಿತ ದ್ವಿ ಮಾನದಂಡಗಳು ಸರಿಯಲ್ಲ ಎಂದು  ಹೇಳಿರುವ ಚೀನಾ, ಭಯೋತ್ಪಾದನೆ ಮತ್ತು ಸಂಘಟನೆ, ಧರ್ಮಗಳ ಆಕ್ರಮಣಕಾರಿತ್ವವನ್ನು ಒಂದೇ ತಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ ಎಂದೂ ಹೇಳಿದೆ. ಅಲ್ಲದೆ ಬಡತನ ನಿರ್ಮೂಲನೆ, ಶಿಕ್ಷಣದ ಮೂಲಕ ಭಯೋತ್ಪಾದನೆ ನಿಗ್ರಹ ಸಾಧ್ಯ ಎಂದೂ ಚೀನಾ ವಾದಿಸಿದೆ. 
ಇನ್ನು ಭಯೋತ್ಪಾದನೆ ಕುರಿತು ಶ್ವೇತಪತ್ರ ಹೊರಡಿಸಿರುವ ಇದೇ ಚೀನಾ, ಈ ಹಿಂದೆ 44 ಮಂದಿ ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ಅಡ್ಡಿಪಡ್ಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ದ್ವಿ ಮಾನದಂಡಗಳ ಕುರಿತು ಮಾತನಾಡು ಚೀನಾ ಮಸೂದ್ ವಿಚಾರದಲ್ಲಿ ಸ್ಪಷ್ಟ ಸಾಕ್ಷ್ಯಾಧಾರಗಳ ಹೊರತಾಗಿಯೂ ಭಾರತದ ನಡೆಗೆ ತಡೆಯೊಡ್ಡುತ್ತಿರುವುದು ಚೀನಾ ದ್ವಿಮಾನದಂಡಕ್ಕೆ ಹಿಡಿದ ಕನ್ನಡಿಯಾಗಿದೆ.
SCROLL FOR NEXT