ವಿದೇಶ

ನೀರವ್ ಮೋದಿ ಬಳಿ 3 ಪಾಸ್ ಪೋರ್ಟ್, ಹಲವು ರೆಸಿಡೆನ್ಸಿ ಕಾರ್ಡುಗಳು ಪತ್ತೆ

Sumana Upadhyaya
ಲಂಡನ್:ಸ್ಕಾಟ್ ಲ್ಯಾಂಡ್ ಯಾರ್ಡ್ ನಲ್ಲಿ ಬಂಧಿತನಾಗಿರುವ ದೇಶಭ್ರಷ್ಟ ವಜ್ರೋದ್ಯಮಿ ನೀರವ್ ಮೋದಿ ಬಳಿ ಮೂರು ಪಾಸ್ ಪೋರ್ಟ್ ಗಳಿದ್ದವು. ನಿನ್ನೆ ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ನೀರವ್ ಮೋದಿಯನ್ನು ಹಾಜರುಪಡಿಸಿದಾಗ ಈ ವಿಷಯ ಬಂದಿದೆ.
48 ವರ್ಷದ ನೀರವ್ ಮೋದಿ ಪರ ವಕೀಲರ ತಂಡ, ಜಾಮೀನಿಗೆ ಮನವಿ ಸಲ್ಲಿಸುವ ವೇಳೆ ಈ ದಾಖಲೆಗಳನ್ನು ಒದಗಿಸಿದ್ದಾರೆ. ಹಲವು ಪ್ರಯಾಣ ದಾಖಲೆಗಳನ್ನು ಪಡೆಯಲು ಈ ಪಾಸ್ ಪೋರ್ಟ್ ಗಳನ್ನು ಹೊಂದಿರುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ. ಆದರೆ ಅದನ್ನು ಜಿಲ್ಲಾ ನ್ಯಾಯಾಧೀಶ ಮೇರಿ ಮಾಲ್ಲನ್ ತಿರಸ್ಕರಿಸಿದ್ದಾರೆ.
ಭಾರತೀಯ ಅಧಿಕಾರಿಗಳು ಹಿಂತೆಗೆದುಕೊಂಡಿರುವ ಪಾಸ್ ಪೋರ್ಟ್ ಈಗ ಮೆಟ್ರೊಪೊಲಿಟನ್ ಪೊಲೀಸರ ಬಳಿಯಿದೆ. ಎರಡನೆಯದ್ದು ಅವಧಿ ಮುಗಿದ ಪಾಸ್ ಪೋರ್ಟ್ ಇಂಗ್ಲೆಂಡ್ ನ ಗೃಹ ಕಚೇರಿಯಲ್ಲಿ ಮತ್ತು ಮೂರನೇ ಪಾಸ್ ಪೋರ್ಟ್ ಇಂಗ್ಲೆಂಡ್ ನ ಚಾಲನೆ ಮತ್ತು ವಾಹನ ಪರವಾನಗಿ ಅಧಿಕಾರಿಗಳ ಬಳಿಯಿದೆ.
ಪಾಸ್ ಪೋರ್ಟ್ ಹೊರತುಪಡಿಸಿ ನೀರವ್ ಮೋದಿ ಹಲವು ವಸತಿ ಕಾರ್ಡುಗಳನ್ನು ಹೊಂದಿದ್ದು ಅವುಗಳಲ್ಲಿ ಕೆಲವು ಅವಧಿ ಮುಗಿದುದಾಗಿದೆ. ಅವುಗಳು ಯುಎಇ, ಸಿಂಗಾಪುರ ಮತ್ತು ಹಾಂಕಾಂಗ್ ದೇಶಗಳದ್ದಾಗಿವೆ.
ಹಲವು ಶತಕೋಟಿ ಹಣ ವಂಚನೆ ಮತ್ತು ಕಳ್ಳಸಾಗಣೆ ಕೇಸಿನಲ್ಲಿ ಆರೋಪಿಯಾಗಿರುವ ನೀರವ್ ಮೋದಿ ಹಲವು ಪಾಸ್ ಪೋರ್ಟ್ ಗಳನ್ನು ಹೇಗೆ ಹೊಂದಿದ್ದನು ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.
ನಿನ್ನೆ ಮೋದಿಯ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶೆ, ಪ್ರಯಾಣದ ದಾಖಲೆಗಳನ್ನು ಪಡೆಯಲು ಹಲವು ಪಾಸ್ ಪೋರ್ಟ್ ಗಳನ್ನು ಪಡೆದುಕೊಂಡಿದ್ದಿರಬಹುದು. ಒಂದು ವೇಳೆ ಜಾಮೀನು ನೀಡಿದರೆ ಮುಂದಿನ ವಿಚಾರಣೆಗಳಿಗೆ ಶರಣಾಗುವ ಸಾಧ್ಯತೆಯಿಲ್ಲ ಎಂಬ ಬಗ್ಗೆ ಸ್ಪಷ್ಟ ಸಾಕ್ಷಿಗಳಿವೆ ಎಂದು ಹೇಳಿ ಜಾಮೀನು ನಿರಾಕರಿಸಿದ್ದಾರೆ.
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರತ ಸರ್ಕಾರದ ಪರವಾಗಿ ವಾದ ಮಂಡಿಸಿದ ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್ ಬಲವಾಗಿ ನೀರವ್ ಮೋದಿಗೆ ಜಾಮೀನು ಅರ್ಜಿಯನ್ನು ವಿರೋಧಿಸಿದರು. ನೀರವ್ ಮೋದಿ ಉದ್ದೇಶಪೂರ್ವಕವಾಗಿ ನ್ಯಾಯಾಂಗದಿಂದ ತಪ್ಪಿಸಿಕೊಳ್ಳುತ್ತಿದ್ದು ಹಲವು ಕ್ರಿಮಿನಲ್ ಕೇಸುಗಳು ಭಾರತೀಯ ಕೋರ್ಟ್ ನಲ್ಲಿ ದಾಖಲಾಗಿದ್ದರೂ ಕೂಡ ಭಾರತಕ್ಕೆ ಹಿಂತಿರುಗಿಲ್ಲ ಎಂದರು.
SCROLL FOR NEXT