ವಿದೇಶ

ಆಸಿಯಾನ್ ಭಾರತದ ಆಕ್ಟ್ ಈಸ್ಟ್ ನೀತಿಯ ಮುಖ್ಯ ಭಾಗ: ಪ್ರಧಾನಿ ನರೇಂದ್ರ ಮೋದಿ 

Sumana Upadhyaya

ಬ್ಯಾಂಕಾಕ್(ಥೈಲ್ಯಾಂಡ್): ತಮ್ಮ ಥೈಲ್ಯಾಂಡ್ ಪ್ರವಾಸದ ಎರಡನೇ ದಿನವಾದ ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ 16ನೇ ಭಾರತ-ಆಸಿಯಾನ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಭಾರತ-ಫೆಸಿಫಿಕ್ ದೃಷ್ಟಿಕೋನದಲ್ಲಿ ಭಾರತ-ಆಸಿಯಾನ್ ಸಹಕಾರವನ್ನು ಸ್ವಾಗತಿಸುತ್ತೇನೆ. ಇಂಡೊ-ಫೆಸಿಫಿಕ್ ದೃಷ್ಟಿಕೋನದಲ್ಲಿ ಭಾರತದ ಆಕ್ಟ್ ಈಸ್ಟ್ ಪಾಲಿಸಿ ಒಂದು ಬಹುಮುಖ್ಯ ಅಂಗವಾಗಿದ್ದು ಆಸಿಯಾನ್ ಅದರ ಮಧ್ಯದಲ್ಲಿದೆ. ಸಮಗ್ರ, ಬಲವಾದ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಆಸಿಯಾನ್ ಭಾರತದ ಹಿತದೃಷ್ಟಿಯಿಂದ ಒಳ್ಳೆಯದು. ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತದ ಬಹು-ವಲಯದ ಒಡನಾಟ, ವ್ಯವಹಾರಗಳನ್ನು ವಿಸ್ತರಿಸಬೇಕಾಗಿದೆ. ಭಾರತ ದೇಶಕ್ಕೆ ಶಿಕ್ಷಣ, ಪ್ರವಾಸೋದ್ಯಮಕ್ಕೆಂದು ಬರುವವರ ಸಂಖ್ಯೆ ಹೆಚ್ಚಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.


ಭಾರತ-ಆಸಿಯಾನ್ ಮುಕ್ತ ವ್ಯಾಪಾರ ಒಪ್ಪಂದ(ಎಫ್ ಟಿಎ)ಯನ್ನು ಪರಾಮರ್ಶಿಸುವ ಇತ್ತೀಚಿನ ನಿರ್ಧಾರವನ್ನು ಸ್ವಾಗತಿಸಿದ ಪ್ರಧಾನಿ, ಇದರಿಂದ ಆರ್ಥಿಕ ಸಹಕಾರ ಭದ್ರವಾಗುತ್ತದೆ. ಕಡಲ ಭದ್ರತೆ, ಆರ್ಥಿಕ, ಕೃಷಿ, ಎಂಜಿನಿಯರಿಂಗ್, ಡಿಜಿಟಲ್ ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆ ಕ್ಷೇತ್ರಗಳಲ್ಲಿ ಗಟ್ಟಿಯಾದ ಸಂಬಂಧ ಬೆಳೆಯಬೇಕಿದೆ ಎಂದರು. ಥೈಲ್ಯಾಂಡ್ ನಲ್ಲಿ ಆಸಿಯಾನ್ ಶೃಂಗಸಭೆಗೆ ಉತ್ತಮ ಆತಿಥ್ಯ ನೀಡಿದ್ದಕ್ಕೆ ಧನ್ಯವಾದ ಹೇಳಿದ ಪ್ರಧಾನಿ ಮುಂದಿನ ವರ್ಷ ಆಸಿಯಾನ್ ಮತ್ತು ಈಸ್ಟ್ ಏಷ್ಯಾ ಶೃಂಗಸಭೆ ಅಧ್ಯಕ್ಷತೆ ವಹಿಸಿಕೊಂಡಿರುವ ವಿಯೆಟ್ನಾಂಗೆ ಶುಭ ಕೋರಿದರು. ಬಲವಾದ ಮತ್ತು ಸಮೃದ್ಧ ಆಗ್ನೇಯ ಏಷ್ಯಾ ರಾಷ್ಟ್ರ ಹೊಂದುವುದು ಭಾರತದ ಬಯಕೆಯಾಗಿದೆ ಎಂದರು.


ನಂತರ ಆಸಿಯಾನ್ ರಾಷ್ಟ್ರಗಳ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕವಾಗಿ ಫೋಟೋ ತೆಗೆಸಿಕೊಂಡರು. 

SCROLL FOR NEXT