ವಿದೇಶ

ಸ್ಪೀಕರ್‌ ಸಮಾವೇಶದಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ: ಪಾಕ್ ವಿರುದ್ಧ ಭಾರತ ಆಕ್ರೋಶ

Vishwanath S

ಮಾಲ್ಡೀವ್ಸ್: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸುವ ಪಾಕ್ ನಿಯೋಗದ ನಿಲುವನ್ನು ಭಾರತ ಪ್ರಬಲವಾಗಿ ವಿರೋಧಿಸಿದೆ.

ಮಾಲ್ಡೀವ್ಸ್ ನಲ್ಲಿ ಭಾನುವಾರ ನಡೆದ ಸ್ಪೀಕರ್ ಗಳ 4ನೇ ದಕ್ಷಿಣ ಏಷ್ಯಾದ ಸ್ಪೀಕರ್ ಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಭಾರತೀಯ ನಿಯೋಗವು ಪಾಕ್ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

4ನೇ ದಕ್ಷಿಣ ಏಷ್ಯಾದ ಸ್ಪೀಕರ್ ಶೃಂಗಸಭೆ ವಿಷಯಕ್ಕೆ ತಾಳೆಯಾಗದ  ವಿಷಯವನ್ನು ಪ್ರಸ್ತಾಪ ಮಾಡುವ ಮೂಲಕ ಈ ವೇದಿಕೆಯನ್ನು ರಾಜಕೀಯಗೊಳಿಸುವುದನ್ನು ಭಾರತ ತಿರಸ್ಕರಿಸಲಿದೆ ಎಂದು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಿಯೋಗ ಕ್ರಿಯಾಲೋಪವೆತ್ತಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆ ಇಂದು ಇಡೀ ಜಗತ್ತಿನ ಮಾನವೀಯತೆಗೆ ಒಡ್ಡಿದ ಅತಿದೊಡ್ಡ ಬೆದರಿಕೆ ಮತ್ತು ಸವಾಲು ಆಗಿದೆ. ಕಾಶ್ಮೀರ ಪರಿಸ್ಥಿತಿಯ ಉಲ್ಲೇಖವನ್ನು ಅಧಿವೇಶನದ ಮಾತುಕತೆಯಿಂದ ಹೊರಗಿಡಬೇಕು ಎಂದು ಅವರು ಆಗ್ರಹ ಪಡಿಸಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ 'ಸುಸ್ಥಿರ ಗುರಿ ಸಾಧಿಸಲು ದಕ್ಷಿಣ ಏಷ್ಯಾದ ಸ್ಪೀಕರ್ ಗಳ ಶೃಂಗಸಭೆಯಲ್ಲಿ ಭಾರತೀಯ ಸಂಸದೀಯ ನಿಯೋಗವನ್ನು ಮುನ್ನಡೆಸಲಾಗುತ್ತಿದೆ. 

ಲೋಕಸಭಾ ಪ್ರಧಾನ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ ಮತ್ತು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಕೂಡ ನಿಯೋಗದ ಭಾಗವಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಹೊರತಾಗಿ; ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ ಮತ್ತು ಶ್ರೀಲಂಕಾ ಸ್ಪೀಕರ್ ವೇದಿಕೆ ರಚಿಸಿಕೊಂಡಿವೆ.

SCROLL FOR NEXT