ವಿದೇಶ

ಬಲದೇವ್ ಕುಮಾರ್ ತಮಗೆ ಬೇಕಾದ ಕಡೆ ಹೋಗಿ ನೆಲೆಸಲಿ: ಪಿಟಿಐ

Srinivasamurthy VN

ಪಾಕ್ ನಲ್ಲಿ ಮುಸ್ಲಿಮರೇ ಸುರಕ್ಷಿತವಾಗಿಲ್ಲ, ಇನ್ನು ಹಿಂದೂ, ಸಿಖ್ಖರು ಹೇಗೆ ಸುರಕ್ಷಿತವಾಗಿರುತ್ತಾರೆ ಎಂದಿದ್ದ ಬಲದೇವ್ ಕುಮಾರ್

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಸಮುದಾಯದವರಿಗೆ ರಕ್ಷಣೆ ಇಲ್ಲ ಎಂದು ಹೇಳಿರುವ ಬಲದೇವ್ ಕುಮಾರ್ ಅವರು ತಮಗೆ ಯಾವ ದೇಶ ಸುರಕ್ಷಿತವೋ ಅಲ್ಲಿಗೆ ಹೋಗಿ ನೆಲಸಲು ಸ್ವತಂತ್ರರು ಎಂದು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷ ಹೇಳಿದೆ.

ತಮ್ಮದೇ ಪಕ್ಷದ ಸದಸ್ಯರಾಗಿರುವ ಬಲದೇವ್ ಕುಮಾರ್, ಪಾಕ್ ನಲ್ಲಿ ಮುಸ್ಲಿಮರೇ ಸುರಕ್ಷಿತವಾಗಿಲ್ಲ, ಇನ್ನು ಹಿಂದೂ, ಸಿಖ್ಖರು ಹೇಗೆ ಸುರಕ್ಷಿತವಾಗಿರುತ್ತಾರೆ ಎಂದಿದ್ದರು. ಅವರ ಈ ಹೇಳಿಕೆ ಪಾಕಿಸ್ತಾನದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸ್ವತಃ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ.

ಬಲದೇವ್ ಕುಮಾರ್ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಪತ್ರಿಕಾ ಹೇಳಿಕೆ ನೀಡಿರುವ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷ, ಬಲದೇವ್ ಕುಮಾರ್ ಅವರು ತಮಗೆ ಯಾವ ದೇಶ ಸುರಕ್ಷಿತವೋ ಅಲ್ಲಿಗೆ ಹೋಗಿ ನೆಲಸಲು ಸ್ವತಂತ್ರರು ಎಂದು ಹೇಳಿದೆ.

ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಖೈಬರ್ ಪುಕ್ತುಂಕ್ವಾದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶೌಕತ್ ಅಲಿ ಯೂಸುಫ್ ಝೈ ಅವರು, ಪಾಕಿಸ್ತಾನದಲ್ಲಿ ಬಲದೇವ್ ಕುಮಾರ್ ಅವರಿಗೆ ಅತಂಕವಿದ್ದರೆ ಅವರು ತಮಗೆ ಎಲ್ಲಿ ಸುರಕ್ಷಿತವೋ ಆ ದೇಶಕ್ಕೆ ಹೋಗಿ ನೆಲೆಸಲು ಸ್ವತಂತ್ರರು ಎಂದು ಹೇಳಿದ್ದಾರೆ. ಅಂತೆಯೇ ಬಲದೇವ್ ಕುಮಾರ್ ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಸದಸ್ಯತ್ವವನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT