ವಿದೇಶ

ಇಡೀ ಜಗತ್ತು ಬೆಂಬಲಿಸದಿದ್ದರೂ ಪಾಕಿಸ್ತಾನ ಮಾತ್ರ ಕಾಶ್ಮೀರಿಗಳ ಪರವಾಗಿ ನಿಲ್ಲುತ್ತದೆ, ಇದು ಜಿಹಾದ್: ಇಮ್ರಾನ್ ಖಾನ್ 

Sumana Upadhyaya

ಇಸ್ಲಾಮಾಬಾದ್: ಕಾಶ್ಮೀರಿಗಳ ಪರವಾಗಿ ನಿಲ್ಲುವವರು ಜಿಹಾದ್ (ಪವಿತ್ರ ಯುದ್ಧ)ನಲ್ಲಿ ತೊಡಗಿರುವವರು. ಇಡೀ ವಿಶ್ವವೇ ಬೆಂಬಲ ನೀಡದಿದ್ದರೂ ಕೂಡ ಪಾಕಿಸ್ತಾನ ಮಾತ್ರ ಕಾಶ್ಮೀರಿಗಳ ಪರವಾಗಿ ನಿಲ್ಲುತ್ತದೆ ಎಂದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.


ಪ್ರಧಾನಿಯಾದ ಬಳಿಕ ಮೊನ್ನೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಇಮ್ರಾನ್ ಖಾನ್ ಕಾಶ್ಮೀರ ಸಮಸ್ಯೆ ಬಗ್ಗೆಯೇ ಭಾಷಣದಲ್ಲಿ ಹೆಚ್ಚು ಮಾತನಾಡಿದ್ದರು. ನಿನ್ನೆ ವಿಶ್ವಸಂಸ್ಥೆ ಪ್ರವಾಸದಿಂದ ಇಸ್ಲಾಮಾಬಾದಿಗೆ ಬಂದಿಳಿದ ಅವರು, ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಇಡೀ ವಿಶ್ವ ಕಾಶ್ಮೀರಿಗಳ ಪರವಾಗಿ ನಿಲ್ಲುತ್ತದೊ, ಬಿಡುತ್ತದೊ ಆದರೆ ನಾವು ಮಾತ್ರ ಅವರ ಪರವಾಗಿ ನಿಲ್ಲೋಣ ಎಂದರು.


ಕಾಶ್ಮೀರಿಗಳ ಪರವಾಗಿ ನಿಲ್ಲುವುದು ಜಿಹಾದ್ ಆಗಿದೆ. ಅಲ್ಹಾ ದೇವರಿಗೆ ಖುಷಿಯಾಗಬೇಕು ಹೀಗಾಗಿ ನಾವು ಕಾಶ್ಮೀರ ಜನತೆಯ ಪರವಾಗಿಯೇ ನಿಲ್ಲೋಣ ಎಂದರು. ಇದು ಹೋರಾಟವಾಗಿದ್ದು ಸಮಯ ಸರಿಯಿಲ್ಲದಿರುವ ಈ ಸಂದರ್ಭದಲ್ಲಿ ಆಶಾವಾದ ಕಳೆದುಕೊಳ್ಳಬೇಡಿ. ನಾವು ಅವರ ಜತೆಗಿದ್ದೇವೆ ಎಂದು ಕಾಶ್ಮೀರಿಗಳು ಬಯಸುತ್ತಿದ್ದಾರೆ, ಹೀಗಾಗಿ ನಾವು ನಿರಾಶೆಯಾಗುವುದು ಮತ್ತು ಅವರನ್ನು ನಿರಾಶೆಪಡಿಸುವುದು ಬೇಡ, ನಾವು ಕಾಶ್ಮೀರ ಜನತೆಯ ಪರವಾಗಿದ್ದರೆ ಅವರು ಈ ಹೋರಾಟದಲ್ಲಿ ಖಂಡಿತ ಗೆಲ್ಲುತ್ತಾರೆ ಎಂದರು.


ಕಳೆದ ಶುಕ್ರವಾರ ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಮಾತನಾಡುತ್ತಾ, ಕಾಶ್ಮೀರದ ಮೇಲೆ ವಿಧಿಸಿರುವ ಅಮಾನವೀಯ ಕರ್ಫ್ಯೂವನ್ನು ಭಾರತ ತೆಗೆದುಹಾಕಿ ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಅವರ ಸುಮಾರು 50 ನಿಮಿಷಗಳ ಭಾಷಣದಲ್ಲಿ ಅರ್ಧಕ್ಕಿಂತ ಹೆಚ್ಚು ಹೊತ್ತು ಕಾಶ್ಮೀರ ಸಮಸ್ಯೆ ಬಗ್ಗೆಯೇ ಮಾತನಾಡಿದರು. ವಿಶ್ವದ ಎರಡು ಪರಮಾಣು ಸಜ್ಜಿತ ದೇಶಗಳು ಯುದ್ಧ ಸಾರಿದರೆ ಅದರ ಪರಿಣಾಮ ಭೀಕರವಾಗಬಹುದು ಎಂದು ಕೂಡ ಎಚ್ಚರಿಕೆ ನೀಡಿದ್ದರು. 

SCROLL FOR NEXT