ಮಾಂಟ್ರಿಯಲ್: ಕೋವಿಡ್-19 ಹರಡುವಿಕೆ ಮಾಹಿತಿಯನ್ನು ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಮರೆಮಾಚುತ್ತಿದ್ದಾರೆ ಎಂದು ತಜ್ಞರು ಟೀಕಿಸಿದ್ದಾರೆ. ಅಪರಾಧವನ್ನು ಒಪ್ಪಿಕೊಳ್ಳದೆ ಮೌನವಾಗಿದ್ದುಕೊಂಡು ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ
ಕೆಲ ದಿನಗಳ ಹಿಂದೆಯೇ ಚೀನಾ ಮಧ್ಯಸ್ಥಿಕೆ ವಹಿಸಿದ್ದರೆ ಕೋವಿಡ್-19 ಪ್ರಸರಣವನ್ನು ಶೇ. 95ರಷ್ಟು ಕಡಿಮೆ ಮಾಡಬಹುದಿತ್ತು ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ನಲ್ಲಿ ಪ್ರಕಟಗೊಂಡಿರುವ ವರದಿಯೊಂದರಲ್ಲಿ ಮಾನವ ಹಕ್ಕುಗಳ ವಕೀಲ ಇರ್ವಿನ್ ಕಾಟ್ಲೆರ್ ಹೇಳಿದ್ದಾರೆ. ಇದಕ್ಕೆ ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ಅಧ್ಯಯನವೂ ಒಳಗೊಂಡಂತೆ ಅನೇಕ ಪುರಾವೆಗಳಿವೆ ಎಂಬುದಾಗಿ ಅವರು ಹೇಳಿದ್ದಾರೆ.
ವುಹಾನ್ ಸೆಂಟ್ರಲ್ ಆಸ್ಪತ್ರೆಯ ತುರ್ತು ವಿಭಾಗದ ನಿರ್ದೇಶಕ ಡಾ. ಐ. ಫೆನ್ ಕೊರೋನಾವೈರಸ್ ಬಗ್ಗೆ ಅನೇಕ ವೈದ್ಯರಿಗೆ ಮಾಹಿತಿ ನೀಡಿದ್ದರು. ಆ ಮಾಹಿತಿ ಪಡೆದಿದ್ದ ವೈದ್ಯರಲ್ಲಿ ಒಬ್ಬರಾದ ಲಿ ವೆನ್ಲಿಯಾಂಗ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾದರೆ ಡಾ. ಐ ಫೆನ್, ಇತ್ತೀಚಿಗೆ ಕಣ್ಮರೆಯಾಗಿದ್ದಾರೆ ಎಂದು ದಿನಪತ್ರಿಕೆಯೊಂದರಲ್ಲಿ ವರದಿ ಪ್ರಕಟಗೊಂಡಿದೆ.
ಕೊರೋನಾವೈರಸ್ ಬಗ್ಗೆ ಜಾಗೃತಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಜನವರಿ 1, 2020ರಲ್ಲಿ ಡಾ. ಲಿ ವೆನ್ಲಿಯಾಂಗ್ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಖಂಡಿಸಲಾಗಿತ್ತು. ಇದೇ ರೀತಿಯ ಆರೋಪದ ಮೇಲೆ ಇತರ ಏಳು ಜನರನ್ನು ಬಂಧಿಸಲಾಗಿದ್ದು, ಅವರ ಭವಿಷ್ಯ ಇನ್ನೂ ತಿಳಿಯದಂತಾಗಿದೆ.
ಈ ಮಧ್ಯೆ ಕೋವಿಡ್-19 ಜನರಿಂದ ಜನರಿಗೆ ಹರಡಲಿದ್ದು, ಸೂಕ್ತ ನಿಯಂತ್ರಣ ಕ್ರಮವನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದು ಹಾಂಗ್ ಕಾಂಗ್ ಸೋಂಕು ಕೇಂದ್ರ ವಿವಿಯ ಅಧ್ಯಕ್ಷ ಡಾ. ಹೊ ಪಾಕ್ ಲಿಯಾಂಗ್ ಜನವರಿ 4 ರಂದೇ ಒತ್ತಾಯಿಸಿದ್ದಾಗಿ ತಜ್ಞರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಈ ಊಹೆಗಳನ್ನು ಅಲ್ಲಗಳೆದಿದ್ದ ವುಹಾನ್ ಮುನ್ಸಿಪಾಲ್ ಆರೋಗ್ಯ ಆಯೋಗ ಪ್ರಾಥಮಿಕ ತನಿಖೆಯಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಘೋಷಿಸಿತ್ತು
ಚೀನಾದ ಹೇಳಿಕೆಯನ್ನು ಜನವರಿ 14ರಂದು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಸಮರ್ಥಿಸಿಕೊಂಡಿತ್ತು. ಕೊರೋನಾಸೋಂಕು ನಿವಾರಣೆಯಲ್ಲಿ ಚೀನಾ ಕೈಗೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಜನವರಿ 22 ರಂದು ಪ್ರಶಂಸಿಸಿದ್ದರು.
ಜನವರಿ 23 ರಂದು ಚೀನಾ ಮೊದಲ ಹೆಜ್ಜೆಯಾಗಿ ವುಹಾನ್ ನಲ್ಲಿ ಕ್ವಾರೆಂಟೈನ್ ನಲ್ಲಿ ಆರಂಭಿಸಿತ್ತು. ಇಷ್ಟು ಹೊತ್ತಿಗಾಗಲೇ ಲಕ್ಷಾಂತರ ಜನರು ಹೊಸ ವರ್ಷದ ಆಚರಣೆಗಾಗಿ ವುಹಾನ್‌ಗೆ ಭೇಟಿ ನೀಡಿದ್ದರು, ರೋಗ ಲಕ್ಷಣಗಳಿಲ್ಲದ ಲಕ್ಷಾಂತರ ಜನರು ಚೀನಾದಿಂದ ವಿದೇಶಗಳಿಗೆ ಭೇಟಿ ನೀಡಿದ್ದರು.
ಒಂದು ಮಾತಿನಲ್ಲಿ ಹೇಳುವುದಾದರೆ, ಅಧ್ಯಕ್ಷ ಕ್ಸಿ ಅವರ ಸರ್ಕಾರವು ಕೋವಿಡ್-19 ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ.ಇದು ಇತಿಹಾಸದ ಅತ್ಯಂತ ದೊಡ್ಡ ಮಾನವೀಯ ಬಿಕ್ಕಟ್ಟುಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ತಜ್ಞರು ಟೀಕಿಸಿದ್ದಾರೆ.