ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಹಣವನ್ನು ನಿಲ್ಲಿಸಿದ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ
ಚೀನಾ ದೇಶದಲ್ಲಿ ಕೊರೋನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ನಂತರ ಅದು ವೇಗವಾಗಿ ಹಬ್ಬುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮೊದಲೇ ಎಚ್ಚರಿಕೆ ನೀಡದೆ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಮತ್ತು ತೀವ್ರವಾಗಿ ನಿಗಾವಹಿಸುವಲ್ಲಿ ವಿಫಲವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ವಾಷಿಂಗ್ಟನ್: ಕೊರೋನವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಿಸುವಲ್ಲಿ ವಿಫಲವಾಗಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ)ಗೆ ತಾತ್ಕಾಲಿಕವಾಗಿ ಹಣಕಾಸು ನೆರವು ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.
ಮಂಗಳವಾರ ಶ್ವೇತಭವನದಲ್ಲಿ ಕರೋನವೈರಸ್ ಕುರಿತ ಪ್ರತಿದಿನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಡಬ್ಲ್ಯುಎಚ್ಒ ತನ್ನ ಮೂಲ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದು, ಇದಕ್ಕೆ ಸಂಸ್ಥೆ ಜವಾಬ್ದಾರಿ ಹೊರಬೇಕಿದೆ ಎಂದು ಹೇಳಿದ್ದಾರೆ.
‘ವಿಶ್ವ ಆರೋಗ್ಯ ಸಂಸ್ಥೆಗೆ ಧನಸಹಾಯವನ್ನು ನಿಲ್ಲಿಸುವಂತೆ ಆಡಳಿತಕ್ಕೆ ಸೂಚಿಸುತ್ತಿದ್ದೇನೆ.ಕೊರೊನವೈರಸ್ ನಿಗ್ರಹಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರದ ಬಗ್ಗೆ ಪರಿಶೀಲಿಸಲಾಗುವುದು.’ ಎಂದು ಟ್ರಂಪ್ ಹೇಳಿದ್ದಾರೆ.
ಚೀನಾದಲ್ಲಿ ವಸ್ತು ಸ್ಥಿತಿಯನ್ನು ತಿಳಿಯಲು ಅಲ್ಲಿನ ಪಾರದರ್ಶಕತೆಯ ಕೊರತೆಯನ್ನು ತಿಳಿಯಲು ಡಬ್ಲ್ಯೂಎಚ್‍ಒ ವೈದ್ಯಕೀಯ ತಜ್ಞರನ್ನು ಕಳುಹಿಸಿದ್ದರೆ ಸೋಂಕು ನಿಯಂತ್ರಿಸಬಹದುದಿತ್ತು. ಮತ್ತು ಅಪಾರ ಸಾವು ತಡೆಯಬಹುದಿತ್ತು. ಅಲ್ಲದೆ, ವಿಶ್ವಾದ್ಯಂತ ಆರ್ಥಿಕ ನಷ್ಟವನ್ನೂ ತಪ್ಪಿಸಬಹುದಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ, ಪ್ರತಿವರ್ಷ 400ರಿಂದ 500 ದಶಲಕ್ಷ ಡಾಲರ್ ಹಣಕಾಸು ಸಹಾಯವನ್ನು ಡಬ್ಲ್ಯೂಎಚ್‍ಒಗೆ ಒದಗಿಸುತ್ತಿದೆ.
ಅಮೆರಿಕಾದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಪಸರಿಸಿದ್ದರೂ ಕೂಡ ಅದರ ಅಪಾಯದ ಬಗ್ಗೆ ಅರಿವಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ತಮ್ಮ ದೇಶಕ್ಕೆ ಮುನ್ನೆಚ್ಚರಿಕೆ ನೀಡಿರಲಿಲ್ಲ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ನೇರವಾಗಿಯೇ ತಮ್ಮ ಅಸಮಾಧಾನವನ್ನು ಈ ಹಿಂದೆ ತೋಡಿಕೊಂಡಿದ್ದರು.
ಸದ್ಯ ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಗೆ ಅತಿ ಹೆಚ್ಚು ಬಲಿಯಾದವರು ಅಮೆರಿಕನ್ನರೇ ಆಗಿದ್ದಾರೆ. ಇಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 5 ಲಕ್ಷದ 94 ಸಾವಿರದ 207 ಮಂದಿಗೆ ಸೋಂಕು ತಗುಲಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.