ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಸಹೋದರ ರಾಬರ್ಟ್ ಟ್ರಂಪ್ ಅವರು ಭಾನುವಾರ ನಿಧನ ಹೊಂದಿದ್ದಾರೆಂದು ತಿಳಿದುಬಂದಿದೆ.
ಸಹೋದರನ ಅಗಲಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಟ್ರಂಪ್ ಅವರು, ನನ್ನ ಸಹೋದರ ರಾಬರ್ಟ್ ಕುರಿತ ಈ ಸುದ್ದಿಯನ್ನು ಹೇಳಲು ಹೃದಯ ಅತ್ಯಂತ ಭಾರ ಎನಿಸುತ್ತಿದೆ. ಕಳೆದ ರಾತ್ರಿ ನಾನು ನನ್ನ ಸಹೋದರನನ್ನು ಕಳೆದುಕೊಂಡಿದ್ದೇನೆ. ಸಹೋದರ ಶಾಂತಿಯುತವಾಗಿ ಚಿರನಿದ್ರೆಗೆ ಜಾರಿದ್ದಾರೆ. ರಾಬರ್ಟ್ ನನ್ನ ಸಹೋದರ ಮಾತ್ರನಲ್ಲ, ಅತ್ಯುತ್ತಮ ಸ್ನೇಹಿತನಾಗಿದ್ದ. ಆತನ ಅಗಲಿಕೆ ಬಹಳ ನೋವು ತಂದಿದೆ. ಮತ್ತೆ ಆತನನ್ನು ಭೇಟಿಯಾಗುತ್ತೇನೆ. ಆತನ ನೆನಪು ಸದಾಕಾಲ ನನ್ನೊಂದಿಗಿರುತ್ತದೆ. ರಾಬರ್ಟ್ ಐ ಲವ್ ಯು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ರಂಪ್ ಅವರು ಹೇಳಿದ್ದಾರೆ.
ರಾಬರ್ಟ್ ಟ್ರಂಪ್ ಅವರು ಡೊನಾಲ್ಡ್ ಟ್ರಂಪ್ ಅವರ ನಾಲ್ವರು ಒಡಹುಟ್ಟಿದವರಲ್ಲೊಬ್ಬರಾಗಿದ್ದಾರೆ. ಅಮೆರಿಕಾ ಅಧ್ಯಕ್ಷ ಸೋದರ ತಂಗಿ ಮೇರೆ ಬರೆದಿದ್ದ ಟೂ ಮಚ್ ಆ್ಯಂಡ್ ನೆವರ್ ಇನಫ್ ಕೃತಿಯ ಪ್ರಕಟಣೆಯನ್ನು ತಡೆಹಿಡಿಯುವಂತೆ ಕೋರಿ ಟ್ರಂಪ್ ಕುಟುಂಬದ ಪರವಾಗಿ ರಾಬರ್ಟ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕೃತಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ವಿವಾದಾತ್ಮಕ ವಿಚಾರಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.