ವಿದೇಶ

ಜಗತ್ತಿನಲ್ಲೇ ಅತೀ ದೊಡ್ಡ ಪ್ರಯೋಗ: ಜಾನ್ಸನ್ ‌ಅಂಡ್ ಜಾನ್ಸನ್‌ನಿಂದ 60,000 ಮಂದಿ ಮೇಲೆ ಮೂರನೇ ಹಂತದ ಲಸಿಕೆ ಪ್ರಯೋಗ

Srinivasamurthy VN

ವಾಷಿಂಗ್ಟನ್: ಕೊರೋನಾ ವೈರಸ್ ಸೋಂಕಿಗೆ ಲಸಿಕೆ ಕಂಡುಹಿಡಿಯುವ ರೇಸ್ ನಲ್ಲಿ ಅಮೆರಿಕ ಮೂಲದ ಜಾನ್ಸನ್ ‌ಅಂಡ್ ಜಾನ್ಸನ್‌ ಸಂಸ್ಥೆ ಕೂಡ ಮುಂಚೂಣಿಯಲ್ಲಿದ್ದು, ಈ ಸಂಸ್ಥೆ ಇದೀಗ ಜಗತ್ತಿನ ಅತೀ ದೊಡ್ಡ ಪ್ರಮಾಣದ ಲಸಿಕೆ ಪ್ರಯೋಗ ನಡೆಸುತ್ತಿದೆ.

ಹೌದು.. ಕೊರೋನಾ ವೈರಸ್ ವಿರುದ್ಧ ಜಾನ್ಸನ್ ‌ಆಂಡ್ ಜಾನ್ಸನ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆದಿದ್ದು, ಈ ಪ್ರಯೋಗದಲ್ಲಿ ಜಗತ್ತಿನಲ್ಲೇ ಅತೀ ದೊಡ್ಡ ಪ್ರಮಾಣದ ಅಂದರೆ ಸುಮಾರು 60,000 ಸ್ವಯಂಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. 

ಈ ಬಗ್ಗೆ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದ್ದು, ಮುಂಬರುವ ಸೆಪ್ಟೆಂಬರ್‌ನಲ್ಲಿ ಪ್ರಯೋಗ ಆರಂಭಗೊಳ್ಳುವ ನಿರೀಕ್ಷೆ ಇದೆ. ಅಮೆರಿಕ, ಬ್ರೆಜಿಲ್, ಮೆಕ್ಸಿಕೊ ಸೇರಿದಂತೆ 180 ಕಡೆಗಳಲ್ಲಿ ಪ್ರಯೋಗ ನಡೆಯಲಿದೆ ಎಂದು ವರದಿ ಉಲ್ಲೇಖಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಾನ್ಸನ್ ‌ಆಂಡ್ ಜಾನ್ಸನ್‌ ವಕ್ತಾರರು, ಲಸಿಕೆಯ ಮೊದಲೆರಡು ಪ್ರಯೋಗಳು ಬಹುತೇಕ ಯಶಸ್ವಿಯಾಗಿದ್ದು, ಇದೇ ಕಾರಣಕ್ಕೆ ಮೂರನೇ ಹಂತದ ಪ್ರಯೋಗ ಆದಷ್ಟು ದೃಢವಾಗಿರಬೇಕು ಎಂದು ಉದ್ದೇಶಿಸಲಾಗಿದೆ. ಇದರಲ್ಲಿ ಸುಮಾರು 60,000 ಸ್ವಯಂಸೇವಕರು ಭಾಗಿಯಾಗಲಿದ್ದು,  ಹೆಚ್ಚಿನ ಪ್ರಕರಣ ಹೊಂದಿರುವ ಕಡೆಗಳಲ್ಲೇ ನಡೆಸಲಾಗುವುದು. ಮೂರನೇ ಹಂತದ ಪ್ರಯೋಗಕ್ಕೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. 

SCROLL FOR NEXT