ವಿದೇಶ

ರೈತರ ಪ್ರತಿಭಟನೆ: ಕೆನಡಾ ಆಯ್ತು ಈಗ ಬ್ರಿಟನ್ ಸಂಸದರಿಂದಲೂ ಮೂಗು ತೂರಿಸುವ ಯತ್ನ! 

Srinivas Rao BV

ಲಂಡನ್: ಭಾರತದಲ್ಲಿ ರೈತರು ಹೊಸ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಅಲ್ಲಿನ ವಿದೇಶಾಂಗ ಸಚಿವರಿಗೆ ಬ್ರಿಟನ್ ಸಂಸದರು ಆಗ್ರಹಿಸಿದ್ದಾರೆ. 

36 ಮಂದಿ ಭಾರತೀಯ ಮೂಲದ ಬ್ರಿಟನ್ ಸಂಸದರು ಬ್ರಿಟನ್ ನ ವಿದೇಶಾಂಗ ಸಚಿವ ಡೊಮಿನಿಕ್ ರಾಬ್ ಅವರು ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಬ್ರಿಟನ್ ನಲ್ಲಿರುವ ಪಂಜಾಬಿಗಳ ಮೇಲೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತನಾಡಬೇಕೆಂದು ಪತ್ರ ಬರೆದು ಆಗ್ರಹಿಸಿದ್ದಾರೆ.

ಬ್ರಿಟೀಷ್ ಸಿಖ್ ಲೇಬರ್ ಸಂಸದ ತನ್ಮನ್ಜೀತ್ ಸಿಂಗ್ ಧೆಸಿ ಪತ್ರ ಬರೆದಿದ್ದು, ಭಾರತೀಯ ಮೂಲದ ಸಂಸದರಾದ ವಿರೇಂದ್ರ ಶರ್ಮ, ಸೀಮಾ ಮಲ್ಹೋತ್ರಾ, ವ್ಯಾಲೆರಿ ವಾಜ್, ಲೇಬರ್ ಪಕ್ಷದ ಮಾಜಿ ನಾಯಕ ಜೆರೆಮಿ ಕಾರ್ಬಿನ್ ಸಹ ಪತ್ರಕ್ಕೆ ಸಹಿ ಹಾಕಿ ಬೆಂಬಲಿಸಿದ್ದಾರೆ.

ಹೊಸ ಕೃಷಿ ಕಾಯ್ದೆ ಹಾಗೂ ಅದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ವಿದೇಶದ ನಾಯಕರು ರಾಜಕಾರಣಿಗಳು ನೀಡುತ್ತಿರುವ ಹೇಳಿಕೆಗಳನ್ನು ಭಾರತ ಈಗಾಗಲೇ ಸ್ಪಷ್ಟವಾಗಿ ತಿರಸ್ಕರಿಸಿದ್ದು, ಇವು ಪ್ರಜಾಪ್ರಭುತ್ವವಿರುವ ದೇಶದ ಆಂತರಿಕ ವಿಷಯಗಳೆಡೆಗೆ  ತಪ್ಪಾದ ಗ್ರಹಿಕೆ ಹಾಗೂ ಅನಗತ್ಯವಾದ ಹೇಳಿಕೆಗಳು ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಪಂಜಾಬ್ ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ಹಾಗೂ ಭಾರತ- ಎಫ್ ಸಿಡಿಒ (ವಿದೇಶಿ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯ ಯಾವುದೇ ಸಂವಹನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಭಾರತದ ಸಚಿವರೊಂದಿಗೆ ತುರ್ತು ಸಭೆಯನ್ನು ಏರ್ಪಡಿಸಲು ಪತ್ರದಲ್ಲಿ ಸಂಸದರು ಆಗ್ರಹಿಸಿದ್ದಾರೆ. 

ಭಾರತದಲ್ಲಿನ ರೈತರ ಪ್ರತಿಭಟನೆ ವಿಷಯವನ್ನು ಬ್ರಿಟನ್ ಸಂಸತ್ ನಲ್ಲಿಯೂ ಪ್ರಸ್ತಾಪಿಸುವ ಯತ್ನ ನಡೆದಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬ್ರಿಟನ್ ಸಂಪುಟ ಕಚೇರಿ ಸಚಿವ ಲಾರ್ಡ್ ನಿಕೋಲಾಸ್ ಟ್ರೂ ಯಾವುದೇ ದೇಶದ ಬಗ್ಗೆಯೂ ದೂಷಣೆಯ ವಿಷಯವಾಗಿ ಮಾತನಾಡುವುದಿಲ್ಲ, ನಮ್ಮ ಮೌಲ್ಯಗಳು ಪ್ರಜಾಪ್ರಭುತ್ವದ್ದಾಗಿದೆ; ಅವುಗಳು ವಿಶ್ವಾದ್ಯಂತ ಹರಡಿದ್ದು ಚಾಲ್ತಿಯಲ್ಲಿವೆ, ನಾವು ಅದನ್ನು ಉಳಿಸಿಕೊಳ್ಳುವುದಕ್ಕೆ ಬಯಸುತ್ತೆವೆ ಎಂದು ಹೇಳಿದ್ದಾರೆ.

SCROLL FOR NEXT