ವಿದೇಶ

ಉಕ್ರೇನ್ ವಿಮಾನವನ್ನು ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ: ಅಮೆರಿಕಾ ಅಧಿಕಾರಿಗಳು 

Sumana Upadhyaya

ವಾಷಿಂಗ್ಟನ್: ಕಳೆದ ಮಂಗಳವಾರ ಉಕ್ರೇನ್ ನ ವಿಮಾನ ಭೀಕರ ಅಪಘಾತಕ್ಕೀಡಾಗಿ ಎಲ್ಲಾ 176 ಪ್ರಯಾಣಿಕರು ಮೃತಪಟ್ಟಿದ್ದು ಇರಾನ್ ನ ಕ್ಷಿಪಣಿ ದಾಳಿಯಿಂದ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ. ಅದು ಇರಾನ್ ನ ತಪ್ಪಿನಿಂದ ಆಗಿರಬಹುದೇ ಹೊರತು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯಾಗಿರಲಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.


ಈ ವಿಮಾನ ಅಪಘಾತದಲ್ಲಿ ಕನಿಷ್ಠ 63 ಮಂದಿ ಕೆನಡಾದ ಪ್ರಜೆಗಳು ಮೃತಪಟ್ಟಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸಹ ಟೊರಂಟೊದಲ್ಲಿ ಸುದ್ದಿಗೋಷ್ಠಿಯಲ್ಲಿ ಇದೇ ಮಾತುಗಳನ್ನು ಹೇಳಿದ್ದರು. ಮೇಲ್ಮೈ ವಾಯು ಕ್ಷಿಪಣಿ ದಾಳಿಯಿಂದ ವಿಮಾನ ಅಪಘಾತಕ್ಕೀಡಾಗಿರಬಹುದೆ ಹೊರತು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯಾಗಿರಲಿಕ್ಕಿಲ್ಲ ಎಂದು ಹೇಳಿದ್ದರು.


ತನ್ನ ಕ್ರಾಂತಿಕಾರಿ ಸೇನಾಧಿಕಾರಿ ಖಾಸಿಮ್ ಸೊಲೈಮಾನಿಯನ್ನು ಹತ್ಯೆಗೈದ ಅಮೆರಿಕಾ ಸೇನಾ ನೆಲೆ ಮೇಲೆ ಪ್ರತೀಕಾರವಾಗಿ ಇರಾನ್ ಕ್ಷಿಪಣಿ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ನ ವಿಮಾನ ಅಪಘಾತಕ್ಕೀಡಾಗಿದೆ. ಸೂಕ್ಷ್ಮ ಭದ್ರತೆ ಬಗ್ಗೆ ಮಾತನಾಡಿದ ಅಮೆರಿಕಾದ ಇಬ್ಬರು ಅಧಿಕಾರಿಗಳು ಈ ಅಪಘಾತದ ಹಿಂದೆ ಇರಾನ್ ನ ಉದ್ದೇಶ ಏನಿತ್ತು ಎಂಬುದು ಗೊತ್ತಿಲ್ಲ. ಆದರೆ ಇದು ಬೆದರಿಕೆಯೊಡ್ಡಲು ನಡೆಸಿದ ಅಪಘಾತ ಎಂದು ತಪ್ಪಾಗಿ ಭಾವಿಸಿರಬಹುದು ಎಂದು ಹೇಳಲಾಗುತ್ತಿದೆ.


ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಇರಾನ್ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂಬರ್ಥದಲ್ಲಿ ಹೇಳಿದ್ದರು. ತಾಂತ್ರಿಕ ಸಮಸ್ಯೆಯಿಂದ ವಿಮಾನ ಅಪಘಾತವಾಗಿದೆ ಎಂಬ ಇರಾನ್ ನ ಆರಂಭದ ಹೇಳಿಕೆಯನ್ನು ತಳ್ಳಿಹಾಕಿದ್ದರು.

SCROLL FOR NEXT