ವಿದೇಶ

'ಕಾಶ್ಮೀರ ವಿವಾದ ಭಾರತದ ಆಂತರಿಕ ವಿಷಯ': ಪಾಕಿಸ್ತಾನ ಪ್ರಸ್ತಾಪ ತಿರಸ್ಕರಿಸಿದ ವಿಶ್ವಸಂಸ್ಥೆ 

Sumana Upadhyaya

ಯುನೈಟೆಡ್ ನೇಷನ್ಸ್: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದವನ್ನು ಎತ್ತಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ ವಿರುದ್ಧ ಭಾರತ ಮತ್ತೊಮ್ಮೆ ಛಾಟಿಯೇಟು ಬೀಸಿದೆ.


ತನ್ನ ಪರ ಯಾವ ದೇಶಗಳ ಬೆಂಬಲ ಸಿಗುವುದಕ್ಕೆ ವಿಫಲವಾಗಿರುವ ಪಾಕಿಸ್ತಾನ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಹಾಕಬೇಕಾದ ಕಠಿಣ ಪರಿಶ್ರಮದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದೆ.ಕಾಶ್ಮೀರ ವಿವಾದವನ್ನು ಬಗೆಹರಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೊರೆ ಹೋದ ಪಾಕಿಸ್ತಾನಕ್ಕೆ ಸದ್ಯ ಬೆಂಬಲ ಸಿಕ್ಕಿರುವುದು ಚೀನಾ ದೇಶದಿಂದ ಮಾತ್ರ. 


ಕಾಶ್ಮೀರ ವಿವಾದ ಭಾರತ ಮತ್ತು ಪಾಕಿಸ್ತಾನಗಳ ದ್ವಿಪಕ್ಷೀಯ ವಿಷಯವಾಗಿರುವುದರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಳಿದ ರಾಷ್ಟ್ರಗಳು ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿಲ್ಲ. ಹೀಗಾಗಿ ಏಕಾಂಗಿಯಾಗಿರುವ ಪಾಕಿಸ್ತಾನ ಈಗ ಮತ್ತೆ ಭದ್ರತಾ ಮಂಡಳಿಯ ಮೊರೆ ಹೋಗಿದೆ.


ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗುಪ್ತ ಸಮಾಲೋಚನಾ ಸಭೆಯಲ್ಲಿ ಇತರ ವಿಷಯಗಳ ಕುರಿತು ಚರ್ಚೆ ನಡೆಯುವಾಗ ಚೀನಾ ನಿನ್ನೆ ಕಾಶ್ಮೀರ ವಿವಾದವನ್ನು ಎತ್ತಿತು. ಆಗ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವೊಂದು ಮತ್ತೆ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದೆ, ಆದರೆ ಅದಕ್ಕೆ ಫಲಿತಾಂಶ ಮಾತ್ರ ಶೂನ್ಯವಾಗಿ ಸಿಕ್ಕಿದೆ. ಪಾಕಿಸ್ತಾನದ ಪ್ರಯತ್ನಕ್ಕೆ ಯಾವ ದೇಶಗಳೂ ಬೆಂಬಲ ನೀಡಲು ಮುಂದಾಗದಿರುವುದು ಸಂತೋಷದ ವಿಷಯ ಎಂದಿದ್ದಾರೆ.


ಗುಪ್ತ ಸಮಾಲೋಚನಾ ಸಭೆಯಲ್ಲಿ ಪಾಕಿಸ್ತಾನದ ಪ್ರಸ್ತಾಪವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

SCROLL FOR NEXT