ವಿದೇಶ

ಏಷ್ಯಾ ರಾಷ್ಟ್ರಗಳಿಗೂ ಹಬ್ಬುತ್ತಿರುವ ಕೊರೋನಾ ವೈರಸ್, ಸಾವಿನ ಸಂಖ್ಯೆ 9ಕ್ಕೆ ಏರಿಕೆ 

Sumana Upadhyaya

ಬ್ಯಾಂಕಾಕ್: ಸಾರ್ಸ್ ಮಾದರಿಯ ಕೊರೋನಾ ವೈರಸ್ ಈಗ ಏಷ್ಯಾದ ರಾಷ್ಟ್ರಗಳಿಗೂ ಹಬ್ಬುತ್ತಿರುವುದು ತೀವ್ರ  ಆತಂಕ್ಕೆ ಕಾರಣವಾಗಿದೆ.


 ಬ್ಯಾಂಕಾಕ್ ನಿಂದ ಹಾಂಕಾಂಗ್ ವರೆಗೆ, ಸಿಯೋಲ್ ನಿಂದ ಸಿಡ್ನಿಯವರೆಗೆ ವಿವಿಧ ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆಗೆ ವೈದ್ಯರ ತಂಡಗಳನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ಘೋಷಿಸಲಾಗಿದೆ.


ಚೀನಾದಲ್ಲಿ ಶುರುವಾದ  ಈ ವಿಚಿತ್ರ ಸೋಂಕಿಗೆ ಇದುವರೆಗೆ 9 ಜನ ಬಲಿಯಾಗಿದ್ದಾರೆ. ಥಾಯ್ಲೆಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಲ್ಲಿಯೂ ಕೊರೋನಾ ವೈರಸ್ ಕಾಣಿಸಿಕೊಂಡಿದೆ ಎಂದೂ  ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.


ಥಾಯ್ಲೆಂಡ್ ಸರಕಾರ ಚೀನಾದಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ನಡೆಸುವಂತೆ  ಆದೇಶ ನೀಡಿದೆ. ಹಾಂಕಾಂಗ್ ಏರ್ಪೋರ್ಟ್ ನಲ್ಲಿಯೂ ವೈದ್ಯಕೀಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಚೀನಾದಲ್ಲಿ  300 ಹೆಚ್ಚು ಜನರಿಗೆ ಈ ಸೋಂಕು ತಗುಲಿದೆ ಎಂದೂ ವರದಿಯಾಗಿದೆ. 


ಈ ನಡುವೆ ಹೊಸ ಕರೋನವೈರಸ್ ಗೆ ಲಸಿಕೆ ಅಭಿವೃದ್ಧಿಪಡಿಸಲು ಕನಿಷ್ಠ 6 ತಿಂಗಳ  ಸಮಯಬೇಕು ಎಂದು  ರಷ್ಯಾದ ಆರೋಗ್ಯ ಸಚಿವಾಲಯದ ಬಯೋಮೆಡಿಕಲ್ ಹೆಲ್ತ್ ರಿಸ್ಕ್ ಮ್ಯಾನೇಜ್‌ಮೆಂಟ್‌ನ ಉಪ ನಿರ್ದೇಶಕ ಜರ್ಮನ್ ಶಿಪುಲಿನ್ ಹೇಳಿದ್ದಾರೆ.


ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸುವುದು ಸುಲಭವಾದರೂ ಇದಕ್ಕೆ ಸಾಕಷ್ಟು ಹಣ ವಿನಿಯೋಗಿಸಬೇಕಾಗುತ್ತದೆ. ಎಲ್ಲಾ ಪ್ರಯೋಗ ಅವಧಿ ಒಳಗೊಂಡಂತೆ ಲಸಿಕೆ  ಅಭಿವೃದ್ಧಿಪಡಿಸಲು ಕನಿಷ್ಠ ಅರ್ಧ ವರ್ಷ ತೆಗೆದುಕೊಳ್ಳಲಿದೆ ಎಂದೂ  ಅವರು ಹೇಳಿದ್ದಾರೆ.

SCROLL FOR NEXT