ವಿದೇಶ

ಲಡಾಕ್ ನ ಪಾಂಗೊಂಗ್ ತ್ಸೋ ಪ್ರದೇಶದಿಂದ ಮತ್ತಷ್ಟು ಸೇನಾಪಡೆಯನ್ನು ಹಿಂತೆಗೆದುಕೊಂಡ ಚೀನಾ:ಮೂಲಗಳು

Sumana Upadhyaya

ನವದೆಹಲಿ: ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯ ಗಡಿ ವಾಸ್ತವ ರೇಖೆಯ ಪಾಂಗೊಂಗ್ ತ್ಸೋ ಬಳಿಯಿಂದ ತನ್ನ ಸೇನೆಯನ್ನು ಚೀನಾ ಮತ್ತಷ್ಟು ಹಿಂತೆಗೆದುಕೊಂಡಿದೆ ಎಂಬ ಮಾಹಿತಿ ಸಿಕ್ಕಿದೆ.

ಗಡಿ ವಾಸ್ತವ ರೇಖೆಯಿಂದ ಸಂಪೂರ್ಣವಾಗಿ ಸೇನಾ ನಿಲುಗಡೆಯನ್ನು ಹಿಂತೆಗೆದುಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳು, ಕಾರ್ಯವಿಧಾನಗಳ ಬಗ್ಗೆ ಚರ್ಚಿಸಲು ಭಾರತ-ಚೀನಾ ದೇಶಗಳ ಲೆಫ್ಟಿನೆಂಟ್ ಜನರಲ್ ಮಟ್ಟದ ಮತ್ತೊಂದು ಸುತ್ತಿನ ಮಾತುಕತೆ ನಡೆಯುವುದಕ್ಕೆ ಮುನ್ನ ಈ ಬೆಳವಣಿಗೆಗಳು ನಡೆದಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಪೂರ್ವ ಲಡಾಕ್ ನ ಪಾಂಗೊಂಗ್ ತ್ಸೋನಲ್ಲಿ ಎರಡೂ ದೇಶಗಳ ಸೇನಾಪಡೆ ನಿಯೋಜನೆ ನಂತರ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ನಂತರ ಘರ್ಷಣೆ ನಡೆದು ಎರಡೂ ದೇಶಗಳ ಅಪಾರ ಸೈನಿಕರು ಸಾವು-ನೋವು ಕಂಡಿದ್ದಾರೆ. ಪಾಂಗೊಂಗ್ ತ್ಸೋ, ಫಿಂಗರ್ ಫೋರ್ ಮತ್ತು ದೆಪ್ಸಂಗ್ ಗಳಲ್ಲಿ ಸೇನಾಪಡೆಗಳನ್ನು ನಿಯೋಜಿಸಿರುವುದು ಉದ್ವಿಗ್ನ ಸ್ಥಿತಿಗೆ ಕಾರಣವಾಗಿದೆ.

ಭಾರತ ರಾಷ್ಟ್ರದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಕಳೆದ ಭಾನುವಾರ ನಡೆಸಿದ ದೂರವಾಣಿ ಸಂಭಾಷಣೆ ನಂತರ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಕೆಲಸ ಕಳೆದ ಸೋಮವಾರ ಅಧಿಕೃತವಾಗಿ ಆರಂಭವಾಗಿತ್ತು.

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯ ಗಲ್ವಾನ್ ಕಣಿವೆ, ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್ ಗಳಿಂದ ಮೊದಲ ಹಂತದಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವ ಕೆಲಸವನ್ನು ಚೀನಾದ ಸೇನಾಪಡೆ ಆರಂಭಿಸಿದೆ.

SCROLL FOR NEXT