ವಿದೇಶ

ಐಎಎಫ್ ಭಯದಿಂದ ಕರಾಚಿಯನ್ನು ಕತ್ತಲಲ್ಲಿ ಮುಳುಗಿಸಿದ ಪಾಕ್: ಟ್ವಿಟರ್ ನಲ್ಲಿ ಇದರದ್ದೇ ಚರ್ಚೆ 

Srinivas Rao BV

ಪುಲ್ವಾಮದಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ್ದ ದಾಳಿಗೆ ಪ್ರತಿಕಾರವಾಗಿ ಭಾರತ ಬಾಲಾಕೋಟ್ ಭಯೋತ್ಪಾದಕರ ನೆಲೆಗಳ ಮೇಲೆ ಐಎಎಫ್ ನಡೆಸಿದ್ದ ದಾಳಿಯ ಭೀತಿಯಿಂದ ಪಾಕಿಸ್ತಾನ ಒಂದು ವರ್ಷವಾದರೂ ಹೊರಬಂದಿಲ್ಲ. 

ಇದನ್ನು ಸ್ಪಷ್ಟಪಡಿಸುವಂತಹ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದ್ದು, ಭಾರತೀಯ ವಾಯುಪಡೆಯ ಭೀತಿಯಿಂದ ಪಾಕಿಸ್ತಾನದ ಭೂ ಸೇನೆ ಇಡೀ ಕರಾಚಿ ನಗರವನ್ನು ಕತ್ತಲಲ್ಲಿ ಮುಳುಗಿಸಿದ್ದ ಘಟನೆ ವರದಿಯಾಗಿದೆ. 

ಜೂ.09 ರಂದು ರಾತ್ರಿ ಪಾಕಿಸ್ತಾನದ ಕರಾಚಿ ನಗರದ ಮೇಲೆ ಯುದ್ಧ ವಿಮಾನಗಳು ಹಾರಾಡತೊಡಗಿದ್ದವು. ಇದನ್ನು ಭಾರತೀಯ ವಾಯುಪಡೆಯ ವಿಮಾನಗಳೆಂದುಕೊಂಡ ಪಾಕಿಸ್ತಾನದ ಸೇನೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಇಡೀ ಕರಾಚಿ ನಗರದ ವಿದ್ಯುತ್ ನ್ನು ಕಡಿತಗೊಳಿಸಿ ಕತ್ತಲಲ್ಲಿರಿಸಿತ್ತು. ಭಾರತೀಯ ವಾಯುಪಡೆ ಮತ್ತೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಮುಂದಾಗಿದೆ, ಈ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಳಿಸಿದರೆ ಐಎಎಫ್ ಗೆ ಸ್ಪಷ್ಟವಾಗಿ ಏನೂ ಕಾಣುವುದಿಲ್ಲ  ಎಂದು ಪಾಕಿಸ್ತಾನದ ಸೇನೆ ಭಾವಿಸಿತ್ತು. ಆದರೆ ಕರಾಚಿಯಲ್ಲಿ ಹಾರಾಡಿದ್ದ ವಿಮಾನಗಳು ಪಾಕಿಸ್ತಾನದ ವಾಯುಸೇನೆಯದ್ದೇ ಆಗಿದ್ದವು ಎಂಬ ಮಾಹಿತಿ ನಂತರ ಬಹಿರಂಗವಾಗಿದೆ. 

2019 ರಲ್ಲಿ ಪಾಕ್ ನ ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಪಾಕಿಸ್ತಾನಕ್ಕೆ ಈಗಲೂ ದುಃಸ್ವಪ್ನವಾಗಿ ಕಾಡುತ್ತಿದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದ್ದು, ಟ್ವಿಟರ್ ನಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆದರೆ ಪಾಕಿಸ್ತಾನ ಮಾತ್ರ ಕರಾಚಿಯಲ್ಲಿ ನಡೆದಿದ್ದನ್ನು ತಾಂತ್ರಿಕ ದೋಷದಿಂದಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು ಎಂದು ಸಮರ್ಥನೆ ನೀಡಿದೆ.

SCROLL FOR NEXT