ಬೀಜಿಂಗ್: ಚೀನಾದಲ್ಲಿ ಕೊರೋನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಮತ್ತೆ ಹೊಸದಾಗಿ ವೈರಸ್'ಗೆ 22 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 3,158ಕ್ಕೆ ಏರಿಕೆಯಾಗಿದೆ.
ಕೊರೋನಾ ವೈರಸ್ ಎದುರಿಸಲು ಚೀನಾದ ಆರೋಗ್ಯ ಇಲಾಖೆ ಹೆಣಗಾಡುತ್ತಿದ್ದು, ಸಾಕಷ್ಟು ಕ್ರಮಗಳ ಬಳಿಕವೂ ವೈರಸ್ ಹರಡುವಿಕೆ ಮಾತ್ರ ನಿಯಂತ್ರಣಗೊಗಂಡಿಲ್ಲ. ಇದೀಗ ಮತ್ತೆ 22 ಮಂದಿ ಸಾವನ್ನಪ್ಪಿದ್ದು, 24 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಹುಬೆ ಪ್ರಾಂತ್ಯವೊಂದರಲ್ಲೇ 22 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಈ ವರೆಗೂ ಚೀನಾದಲ್ಲಿ 3,158 ಮಂದಿ ವೈರಸ್'ಗೆ ಬಲಿಯಾಗಿದ್ದು, ಸೋಂಕಿತ ಸಂಖ್ಯೆ 80,778ಕ್ಕೆ ಏರಿಕೆಯಾಗಿದೆ. ಕಳೆದ ಮೂರು ತಿಂಗಳಿಂದ 16,145 ಮಂದಿ ಆಸ್ಪತ್ರೆಯಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 61,475 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಈ ನಡುವೆ ಮಾರಕ ಕೊರೋನಾ ವೈರಸ್ ಕೇಂದ್ರ ಸ್ಥಾನ ಹುಬೇ ಪ್ರಾಂತ್ಯದ ವುಹಾನ್ ನಗರಕ್ಕೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಅವರು ಮಂಗಳವಾರ ಭೇಟಿನೀಡಿದ್ದಾರೆ.
ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕ್ಸಿ ಅವರು, ವುಹಾನ್'ಗೆ ಭೇಟಿ ನೀಡಿ ಪರಿಸ್ಥಿತಿ ಕುರಿತು ಅವಲೋಕನ ನಡೆಸಿದರು. ಅಲ್ಲದೆ, ಕೊರೋನಾ ಪೀಡಿತರ ಚಿಕಿತ್ಸೆ, ಮಾರಕ ವ್ಯಾಧಿಯಿದ ಜನರ ರಕ್ಷಣೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ, ಈ ಸಂದರ್ಭದಲ್ಲಿ ಕೊರೋನಾ ವಿರುದ್ಧ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯಕೀಯ ಕಾರ್ಯಕರ್ತರು, ಸೈನಿಕರು, ಸಮುದಾಯ ಕಾರ್ಯಕರ್ತರು, ಪೊಲೀಸ್ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.