ವಿದೇಶ

ಡೊನಾಲ್ಡ್ ಟ್ರಂಪ್ ಭೇಟಿ ಮಾಡಿದ್ದ ಬ್ರೆಜಿಲ್ ನ ಮಾಧ್ಯಮ ವಕ್ತಾರನಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ!

Sumana Upadhyaya

ಬ್ರೆಜಿಲಿಯಾ; ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಸಂವಹನ ಮುಖ್ಯಸ್ಥ ಕಳೆದ ವಾರಾಂತ್ಯ ಫ್ಲೋರಿಡಾ ರೆಸಾರ್ಟ್ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದು, ಅವರಲ್ಲಿ ಇದೀಗ ಕೊರೊನಾ ವೈರಾಣು ಸೋಂಕು ಪತ್ತೆಯಾಗಿದೆ.


ಬ್ರೆಜಿಲ್ ಸರ್ಕಾರದ ಮುಖ್ಯ ವಕ್ತಾರ ಫ್ಯಾಬಿಯೊ ವಾಜ್ನಂಗಾರ್ಟನ್ ಅವರು ಅಧ್ಯಕ್ಷ ಬೋಲ್ಸನಾರೊ ಜೊತೆಗೆ ಕಳೆದ ಶನಿವಾರದಿಂದ ಮಂಗಳವಾರದವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು.


ವಾಜ್ನಂಗಾರ್ಟನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದು ಅದರಲ್ಲಿ ಅಧ್ಯಕ್ಷ ಟ್ರಂಪ್ ಪಕ್ಕದಲ್ಲಿಯೇ ನಿಂತಿದ್ದಾರೆ. ಅಮೆರಿಕ ಪ್ರವಾಸ ಮುಗಿಸಿ ಬ್ರೆಜಿಲ್ ಗೆ ಹೋದ ಮೇಲೆ ಅವರಲ್ಲಿ ಜ್ವರ ತರಹದ ಲಕ್ಷಣಗಳು ಕಂಡುಬಂದಿದ್ದು ಪರೀಕ್ಷೆ ಮಾಡಿಸಿ ನೋಡಿದಾಗ ಕೊರೊನಾ ವೈರಾಣು ಸೋಂಕು ಎಂದು ಪತ್ತೆಯಾಗಿದೆ ಎಂದು ಬ್ರೆಜಿಲ್ ಅಧ್ಯಕ್ಷರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.


ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ಈ ಬಗ್ಗೆ ಹೆಚ್ಚು ಆತಂಕಪಡುವುದಿಲ್ಲ, ಫ್ಲೋರಿಡಾದಲ್ಲಿ ನಾವೆಲ್ಲ ಒಟ್ಟಿಗೆ ರಾತ್ರಿ ಭೋಜನ ಸವಿದಿದ್ದು ಹೌದು. ಅಲ್ಲಿ ಮಾಧ್ಯಮದವರು ಇದ್ದರೋ, ಇಲ್ಲವೋ ಎಂದು ನನಗೆ ಗೊತ್ತಿಲ್ಲ, ಬ್ರೆಜಿಲ್ ನ ಮಾಧ್ಯಮ ವಕ್ತಾರ ಅಲ್ಲಿ ಇದ್ದಿದ್ದರೆ ಈಗ ಏನೂ ಮಾಡಲು ಸಾಧ್ಯವಿಲ್ಲ. ಅಸಹಜವಾಗಿರುವುದನ್ನು ನಾವೇನು ಮಾಡಿಲ್ಲ. ನನಗೆ ಆತಂಕ, ಭಯವಿಲ್ಲ ಎಂದಿದ್ದಾರೆ. 


ಅಮೆರಿಕದಲ್ಲಿರುವ ಬ್ರೆಜಿಲ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವಾಜ್ನಂಗಾರ್ಟನ್ ಅವರಲ್ಲಿ ಕೊರೊನಾ ವೈರಸ್ ಪತ್ತೆಯಾದ ಬಗ್ಗೆ ಅಮೆರಿಕ ಬ್ರೆಜಿಲ್ ಸರ್ಕಾರದ ಮಾಹಿತಿ ಕೇಳಿರುವುದಾಗಿ ಒ ಗ್ಲೊಬೊ ಎಂಬ ಪತ್ರಿಕೆ ವರದಿ ಮಾಡಿದೆ.

SCROLL FOR NEXT