ರೋಮ್: ಕೊರೋನಾ ವೈರಸ್ ವಿರುದ್ಧ ಹೋರಾಡಲು ಇಡೀ ದೇಶವನ್ನೇ ಬಂದ್ ಮಾಡಿದ್ದರೂ ವೈರಸ್'ಗೆ ಬಲಿಯಾಗುತ್ತಿರುವ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಇಟಲಿ ರಾಷ್ಟ್ರ ಕಂಗಾಲಾಗಿದೆ.
ಸಾಕಷ್ಟು ಕ್ರಮಗಳ ಹೊರತಾಗಿಯು ಇಟಲಿಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವವರ ಮತ್ತು ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ, ಶುಕ್ರವಾರ ಒಂದೇ ದಿನ ಈ ರಾಷ್ಟ್ರದಲ್ಲಿ 2,547 ಜನರಿಗೆ ಸೋಂಕು ತಗುಲಿದ್ದು, ಒಂದೇ ದಿನ 250 ಮಂದಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಇಟಲಿಯಲ್ಲಿ ಸೋಂಕು ಪೀಡಿತರ ಸಂಖ್ಯೆ 17660ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸಾವಿನ ಸಂಖ್ಯೆ 1266ಕ್ಕೆ ಏರಿದೆ.
ಜನಸಂಖ್ಯೆಯಲ್ಲಿ ಕರ್ನಾಟಕಕ್ಕಿಂತಲೂ (6.50ಕೋಟಿ) ಸಣ್ಣದಾದ ಇಟಲಿಯಲ್ಲಿ ರೋಗ ಪೀಡಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಇದಕ್ಕೆ ತಜ್ಞರು ಕೆಲ ಕಾರಣಗಳನ್ನೂ ನೀಡಿದ್ದಾರೆ.
ಇಟಲಿಯಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಗೂ ತಿಂಗಳ ಮೊದಲೇ ಸಾವಿರಾರು ಜನರಲ್ಲಿ ನ್ಯುಮೋನಿಯಾ ರೀತಿಯ ತೊಂದರೆ ಕಾಣಿಸಿಕೊಂಡಿದೆ. ಆದರೆ, ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡಿರಲಿಲ್ಲ.
ಇಟಲಿಯಲ್ಲಿ 50 ವರ್ಷ ದಾಟಿದವರ ಸಂಖ್ಯೆ ಹೆಚ್ಚಾಗಿದೆ. ಸೋಂಪು ಪೀಡಿತರಲ್ಲಿ ಇವರ ಸಂಖ್ಯೆಯೇ ಹೆಚ್ಚಾಗಿ ಕಂಡು ಬಂದಿದೆ. ಇಟಲಿಯಲ್ಲಿ ಧೂಮಪಾನಿಗಳ ಇತರೆ ದೇಶಗಳಿಗೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿದೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚು. ಇಟಲಿಯಲ್ಲಿ ಆತ್ಮೀಯರನ್ನು ಕೆನ್ನೆಗೆ ಕೆನ್ನೆ ತಾಕಿಸಿ ಮುತ್ತಿಕ್ಕಿ ಸ್ವಾಗತಿಸುವ ಇಲ್ಲವೆ ಬೀಳ್ಕೊಡುವ ಸಂಪ್ರದಾಯ ಹೆಚ್ಚು, ಇದು ಕೂಡ ಸೋಂಕು ಹರಡಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.