ವಿದೇಶ

ಜಗತ್ತಿನಲ್ಲಿ ಕೊರೋನಾ ಪೀಡಿತರು 7 ಲಕ್ಷಕ್ಕೂ ಅಧಿಕ, ಇಟಲಿ, ಸ್ಪೈನ್ ನಲ್ಲಿ ಅತಿ ಹೆಚ್ಚು ಸಾವು

Sumana Upadhyaya

ನವದೆಹಲಿ:ಜಾಗತಿಕ ಮಟ್ಟದಲ್ಲಿ ಕೊರೋನಾ ಪೀಡಿತರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ. ಇದುವರೆಗೆ 33 ಸಾವಿರದ 500 ಮಂದಿ ಮೃತಪಟ್ಟಿದ್ದು 1 ಲಕ್ಷದ 48 ಸಾವಿರ ಮಂದಿ ಗುಣಮುಖವಾಗಿದ್ದಾರೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತರ ಸಂಖ್ಯೆ ಸದ್ಯ ಇಟಲಿ, ಸ್ಪೈನ್ ಮತ್ತು ಚೀನಾ ಆಗಿದ್ದರೆ ನಾಲ್ಕನೇ ಸ್ಥಾನದಲ್ಲಿ ಅಮೆರಿಕಾವಿದೆ. ಯುರೋಪ್ ಖಂಡದಲ್ಲಿ ಇದುವರೆಗೆ ಅತ್ಯಂತ ಹೆಚ್ಚು ಸಾವು ಸಂಭವಿಸಿದೆ.

ಅಮೆರಿಕಾದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1 ಲಕ್ಷದ 32 ಸಾವಿರದ 637 ಆಗಿದ್ದು ಸದ್ಯ ಕೊರೋನಾ ಸೋಂಕಿನ ಹಾಟ್ ಸ್ಪಾಟ್ ದೇಶ ಎನಿಸಿದೆ. ಅಮೆರಿಕಾದಲ್ಲಿ ನ್ಯೂಯಾರ್ಕ್ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪೀಡಿತರಿದ್ದು ಕಳೆದೆರಡು ದಿನಗಳಲ್ಲಿ 237 ಸಾವು ಸಂಭವಿಸುವುದರೊಂದಿಗೆ ಒಟ್ಟು 965 ಸಾವು ಸಂಭವಿಸಿದೆ ಎಂದು ನ್ಯೂಯಾರ್ಕ್ ರಾಜ್ಯದ ಗವರ್ನರ್ ಆಂಡ್ರ್ಯೂ ಕ್ಯೂಮೊ ನಿನ್ನೆ ತಿಳಿಸಿದ್ದಾರೆ.

ಇಟಲಿಯ ಲೊಂಬರ್ಡಿಯಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತರಿದ್ದು ಇಲ್ಲಿ ಒಂದೇ ದಿನದಲ್ಲಿ 416 ಆಗಿದೆ. ನಿನ್ನೆಯ ಹೊತ್ತಿಗೆ ಇಟಲಿಯಲ್ಲಿ 6 ಸಾವಿರದ 360 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ ಸೋಂಕು ಕಾಣಿಸಿಕೊಂಡು ಕೇವಲ 5 ವಾರಗಳಲ್ಲಿ ಇಷ್ಟೊಂದು ಸಾವು ನೋವು ಉಂಟಾಗಿದೆ. ಇಡೀ ದೇಶದಲ್ಲಿ ಇಲ್ಲಿ 10 ಸಾವಿರದ 779 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ ಜಗತ್ತಿನಲ್ಲಿ ಇಂದು ಸೋಂಕಿತರ ಸಂಖ್ಯೆ 97 ಸಾವಿರದ 689 ದಾಟಿದೆ.

ಸ್ಪೈನ್ ದೇಶದಲ್ಲಿ 78 ಸಾವಿರದ 799 ಸೋಂಕಿತರಿದ್ದು ಇಲ್ಲಿ ಸೋಂಕು ಕಾಣಿಸಿಕೊಂಡು ಮೂರು ವಾರ ಕಳೆದಿದೆ. ಇಲ್ಲಿ ಇದುವರೆಗೆ 6 ಸಾವಿರದ 528 ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ.

ಚೀನಾದಲ್ಲಿ ಸದ್ಯ ದೇಶೀಯ ಮಟ್ಟದಲ್ಲಿ ಕೊರೋನಾ ಪಸರಿಸುವಿಕೆ ನಿಯಂತ್ರಣಕ್ಕೆ ಬಂದಿದೆ. ಇಲ್ಲಿಗೆ ಹೊರಗಿನಿಂದ ಬಂದವರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚೀನಾದಲ್ಲಿ ಇದುವರೆಗೆ 82 ಸಾವಿರದ 122 ಮಂದಿಗೆ ಸೋಂಕು ತಗುಲಿದ್ದು ಅವರಲ್ಲಿ 3 ಸಾವಿರದ 182 ಮಂದಿ ಮೃತಪಟ್ಟಿದ್ದಾರೆ.

SCROLL FOR NEXT