ವಿದೇಶ

ಕೊರೋನಾ ಸೋಂಕು ಗೆದ್ದು ಬಂದ ಸ್ಪೈನ್ ನ 113 ವರ್ಷದ ಅಜ್ಜಿ ಮರಿಯಾ ಬ್ರನ್ಯಾಸ್

Sumana Upadhyaya

ಸ್ಪೈನ್: ಈ ಅಜ್ಜಿ ಎರಡೂ ವಿಶ್ವಯುದ್ಧ ಮತ್ತು ಸ್ಪೈನ್ ನ ನಾಗರಿಕ ಯುದ್ಧಗಳನ್ನು ನೋಡಿದ್ದರು. ಇಂದು ಇಡೀ ವಿಶ್ವ ಕೊರೊನಾ ವೈರಸ್ ಸೋಂಕಿನಲ್ಲಿ ನಲುಗಿ ಹೋಗಿದೆ. ಅದರಲ್ಲೂ ಸ್ಪೈನ್ ಸೇರಿದಂತೆ ಯುರೋಪ್‌ನಲ್ಲಿ ಅತಿ ಹೆಚ್ಚು ಸಂಕಷ್ಟವನ್ನು ಬೀರಿದೆ. ಇಂದು ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಸ್ಪೈನ್ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.

ಇಳಿ ವಯಸ್ಸಿನವರಿಗೆ ಸೋಂಕು ತಗುಲಿದರೆ ಮತ್ತೆ ಗುಣಮುಖರಾಗುವವರು ಅಪರೂಪ. ರೋಗನಿರೋಧಕ ಶಕ್ತಿ ಕಡಿಮೆಯಿರುವುದರಿಂದ ಇಳಿ ವಯಸ್ಸಿನವರು ಮತ್ತು ಸಣ್ಣ ಮಕ್ಕಳು ಹೆಚ್ಚು ಜಾಗ್ರತೆಯಿಂದಿರಬೇಕು ಎನ್ನುತ್ತಾರೆ.

ಅಂತಹುದರಲ್ಲಿ ಸ್ಪೇನ್‌ನ 113 ವರ್ಷದ ಅಜ್ಜಿ ಮಹಾಮಾರಿ ಕೊರೊನಾ ವೈರಸ್ ಸೋಂಕು ಗೆದ್ದು ಬಂದಿದ್ದಾರೆ. ಅವರ ಹೆಸರು ಮರಿಯಾ ಬ್ರನ್ಯಾಸ್. ಕಳೆದ ತಿಂಗಳು ಇವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಸ್ಪೈನ್ ನ ಪೂರ್ವ ನಗರ ಒಲೊಟ್ ನಲ್ಲಿರುವ ಸಾಂತ ಮರಿಯಾ ಡೆಲ್ ಟುರಾ ಕೇರ್ ಹೋಂನಲ್ಲಿ ಚಿಕಿತ್ಸೆ ನೀಡಲಾಯಿತು. ಅಜ್ಜಿ ಆರೋಗ್ಯ ಸುಧಾರಿಸಿದ್ದು, ಕಳೆದ ವೈದ್ಯಕೀಯ ಪರೀಕ್ಷೆಗಳೆಲ್ಲ ನೆಗೆಟಿವ್ ಆಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ಅಜ್ಜಿ ಮರಿಯಾ ಬ್ರನ್ಯಾಸ್

ಸ್ಪೇನ್‌ನಲ್ಲಿ ಕೋವಿಡ್ ಸೋಂಕು ಗೆದ್ದ ಅತಿ ಹಿರಿಯ ವ್ಯಕ್ತಿ ಮತ್ತು ಮಹಿಳೆ ಎಂಬ ಬಿರುದಿಗೆ ಈ ಅಜ್ಜಿ ಪಾತ್ರವಾಗಿದ್ದಾರೆ. ಇವರು ಸ್ಪೇನ್‌ನಲ್ಲಿ ಜೀವಿಸುತ್ತಿರುವ ಅತಿ ಹಿರಿಯ ವ್ಯಕ್ತಿ ಕೂಡಾ ಹೌದು.

1907ನೇ ಇಸವಿಯ ಮಾರ್ಚ್ 4ರಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜನಿಸಿದ್ದ ಬ್ರನ್ಯಾಸ್ ಒಂದನೇ ಮಹಾಯುದ್ಧ ಕಾಲಘಟ್ಟದಲ್ಲಿ ಅವರು ಕುಟುಂಬ ಸಮೇತ ಸ್ಪೇನ್‌ಗೆ ಸ್ಥಳಾಂತರಗೊಂಡಿದ್ದರು. 1918-19ನೇ ಸಾಲಿನಲ್ಲಿ ಸ್ಪೇನ್‌ಗೆ ಆವರಿಸಿದ ಸ್ಪ್ಯಾನಿಶ್ ಫ್ಲ್ಯೂ ಹಾಗೂ 1936-39ರ ಸ್ಪೇನ್ ಸಿವಿಲ್ ವಾರ್ ಸಂದರ್ಭದಲ್ಲಿ ಬದುಕುಳಿದ ಮಹಿಳೆ ಎಂಬ ಹೆಗ್ಗಳಿಕೆ ಇದೆ ಈ ಅಜ್ಜಿಗೆ.


ಕೊರೊನಾ ವೈರಸ್ ಸೋಂಕಿಗೆ ಸ್ಪೇನ್‌ನಲ್ಲಿ ಇದುವರೆಗೆ 27,000ಕ್ಕೂ ಹೆಚ್ಚು ಮಂದಿ ಸಾವಿಗೆ ಶರಣಾಗಿದ್ದಾರೆ.

SCROLL FOR NEXT