ವಿದೇಶ

ಹಜ್ ಯಾತ್ರೆ 2021: ಆನ್ ಲೈನ್ ಅರ್ಜಿ ಪ್ರಕ್ರಿಯೆ ಇಂದಿನಿಂದ ಆರಂಭ

Srinivas Rao BV

ಮುಂಬೈ: ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಹಜ್ 2021 ಯಾತ್ರೆಗೆ ಚಾಲನೆ ನೀಡಲಾಗಿದೆ.

ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಶಿಷ್ಟಾಚಾರಗಳನ್ನು ಹಜ್  ಸಮಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು.

ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 10 ಕಡೆಯ ದಿನವಾಗಿದ್ದು, ಹಜ್ ಯಾತ್ರೆಗೆ ಮೆಹರಮ್ (ಪುರುಷ ಸಹ ಯಾತ್ರಿ) ಇಲ್ಲದ ಪ್ರವರ್ಗದಲ್ಲಿ ಅರ್ಜಿ ಭರ್ತಿ ಮಾಡಿರುವ ಮಹಿಳೆಯರಿಗೂ ಹಜ್ ಯಾತ್ರೆ ಸಿಂಧುವಾಗುತ್ತದೆ ಎಂದರು.

ಮುಂಬೈ ಹಜ್ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಚಿವರು ತಿಳಿಸಿದರು. ಹಜ್ ಮಾರ್ಗಸೂಚಿಗಳನ್ನು ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಹೊರಡಿಸಲಾಗಿದೆ. ಯಾತ್ರಾರ್ಥಿಗಳು ಆನ್ ಲೈನ್, ಆಫ್ ಲೈನ್ ಮತ್ತು ಹಜ್ ಮೊಬೈಲ್ ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದರು.

ಹಜ್ ಯಾತ್ರೆ 2021 ರ ಜೂನ್ ಜುಲೈ ನಲ್ಲಿ ನಿಗದಿಯಾಗಿದ್ದು, ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತ ಮತ್ತು ಸೌದಿ ಅರೆಬಿಯಾದ ಜನರ ಆರೋಗ್ಯ ಮತ್ತು ಯೋಗ ಕ್ಷೇಮಕ್ಕಾಗಿ ಸೌದಿ ಅರೇಬಿಯಾ ಸರ್ಕಾರ ಮತ್ತು ಭಾರತ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇಡೀ ಹಜ್ ಪ್ರಕ್ರಿಯೆ ನಡೆಯಲಿದೆ ಎಂದು ನಖ್ವಿ ಹೇಳಿದರು. 

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಆರೋಗ್ಯ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನಾಗರಿಗ ವಿಮಾನಯಾನ ಸಚಿವಾಲಯ, ಭಾರತೀಯ ಹಜ್ ಸಮಿತಿ, ಸೌದಿ ಅರೇಬಿಯಾದಲ್ಲಿನ ಭಾರತೀಯ ಧೂತಾವಾಸ ಮತ್ತು ಜಡ್ಡಾದಲ್ಲಿನ ಭಾರತೀಯ ಕೌನ್ಸಲ್ ಜನರಲ್ ಮತ್ತು ಇತರ ಸಂಸ್ಥೆಗಳು ಸಾಂಕ್ರಾಮಿಕದ ಸವಾಲುಗಳ ಎಲ್ಲ ಅಂಶಗಳ ಬಗ್ಗೆ ಗಮನ ಇಡಲಿದ್ದು ಇವುಗಳೊಂದಿಗೆ ಸಮಾಲೋಚಿಸಿದ ಬಳಿಕ ಹಜ್ ಪ್ರಕ್ರಿಯೆ ರೂಪಿಸಲಾಗುವುದು ಎಂದರು.

ಹಜ್ ಸಿದ್ಧತೆಗಳನ್ನು ವಿಶೇಷ ಸನ್ನಿವೇಶದ ವಿಶೇಷ ನಿಯಮ, ನಿಬಂಧನೆ, ನಿಯಂತ್ರಣ, ಅರ್ಹತಾ ಮಾನದಂಡ, ವಯೋಮಿತಿಯ ನಿರ್ಬಂಧ, ಆರೋಗ್ಯ, ಸದೃಢತೆ ಅವಶ್ಯಕತೆಗಳು ಮತ್ತು ಕೊರೊನಾ ಸಾಂಕ್ರಾಮಿಕದ  ನಡುವೆ ಸೌರಿ ಅರೇಬಿಯಾದ  ಇತರ ಸೂಕ್ತ ಷರತ್ತುಗಳಡಿ ಮಾಡಲಾಗುತ್ತದೆ.

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಡೀ ಹಜ್ ಯಾತ್ರೆಯ ಪ್ರಕ್ರಿಯೆಯಲ್ಲಿ ಗಣನೀಯ ಬದಲಾವಣೆ ಮಾಡಲಾಗಿದೆ. ಇದರಲ್ಲಿ ವಸತಿ, ಯಾತ್ರಿಕರು ಉಳಿಯುವ ಅವಧಿ, ಸಾರಿಗೆ, ಚಾಲ್ತಿಯಲ್ಲಿರುವ ಅಂತಾರಾಷ್ಟ್ರೀಯ ವಾಯುಯಾನ ಶಿಷ್ಟಾಚಾರದ ಪ್ರಕಾರ ಪ್ರತಿ ಯಾತ್ರಿಕರು ಹಜ್ ಪ್ರಯಾಣಕ್ಕೆ 72 ಗಂಟೆಗಳ ಮೊದಲು ಕರೋನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪ್ರತಿ ಯಾತ್ರಿಕರು ಸೌದಿ ಅರೇಬಿಯಾ ಪ್ರವಾಸಕ್ಕೆ ಮೊದಲು ಅನುಮೋದಿತ ಪ್ರಯೋಗಾಲಯದಿಂದ ಪಡೆದ ನೆಗೆಟೀವಿ ಫಲಿತಾಂಶವಿರುವ ಪಿಸಿಆರ್ ಪರೀಕ್ಷಾ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮತ್ತು ಏರ್ ಇಂಡಿಯಾ ಮತ್ತು ಇತರ ಸಂಸ್ಥೆಗಳಿಂದದ ಪಡೆದ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಹಜ್ 2021ಕ್ಕೆ ನಿರ್ಗಮನ ತಾಣಗಳ ಸಂಖ್ಯೆಯನ್ನು 10ಕ್ಕೆ ಇಳಿಸಲಾಗಿದೆ. ಈ ಮೊದಲು ದೇಶದಾದ್ಯಂತ 21 ಹಜ್ ನಿರ್ಗಮನ ತಾಣಗಳಿದ್ದವು.ಹಜ್  ನಿರ್ಗಮನ ತಾಣಗಳು ಅಹಮದಾಬಾದ್, ಬೆಂಗಳೂರು, ಕೊಚ್ಚಿನ್, ದೆಹಲಿ, ಗುವಾಹತಿ, ಹೈದ್ರಾಬಾದ್, ಕೋಲ್ಕತ್ತಾ, ಲಖನೌ, ಮುಂಬೈ ಮತ್ತು ಶ್ರೀನಗರದಲ್ಲಿ ಸ್ಥಾಪಿಸಲಾಗಿದೆ ಎಂದರು.
 

SCROLL FOR NEXT