ವಿದೇಶ

ಅಮೆರಿಕ ನೂತನ ಉಪಾಧ್ಯಕ್ಷ್ಯೆ ಕಮಲ ಹ್ಯಾರಿಸ್ ಪದಗ್ರಹಣ ಸಮಾರಂಭದಲ್ಲಿ ಭಾರತೀಯ ಮೂಲದ ಸೋದರ ಮಾವ ಭಾಗಿ?! 

Srinivas Rao BV

ಅಮೆರಿಕ ಉಪಾಧ್ಯಕ್ಷರ ಹುದ್ದೆಗೆ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಿದ್ದು, ಭಾರತೀಯ ಮೂಲದ ಮಹಿಳೆಯೆನ್ನುವುದು ಮತ್ತೊಂದು ವಿಶೇಷವಾಗಿದೆ. ಕಮಲ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಪದಗ್ರಹಣ ಸಮಾರಂಭಕ್ಕೆ ಅವರ ಭಾರತೀಯ ಮೂಲದ ಕುಟುಂಬದ ಸಂಬಂಧಿಕರು ತೆರಳುವ ಸಾಧ್ಯತೆ ಇದೆ.    

ಕಮಲ ಹ್ಯಾರಿಸ್ ನ ಸೋದರ ಮಾವ ಗೋಪಾಲನ್ ಬಾಲಚಂದ್ರನ್ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧದ ತಜ್ಞರೂ ಆಗಿದ್ದು, ಜ.20 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

"ನಾನು ಎರಡು ದಿನಗಳ ಹಿಂದೆಯಷ್ಟೇ ಕಮಲಾ ಹ್ಯಾರಿಸ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದೆ, ಅದು ಕೌಟುಂಬಿಕ ಮಾತುಕತೆಯಾಗಿತ್ತು, ರಾಜಕೀಯದ ಬಗ್ಗೆ ಚರ್ಚಿಸಲಿಲ್ಲ, ಜ.20 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ನಾನು ತೆರಳಲು ಯೋಜಿಸುತ್ತಿದ್ದೇನೆ ಎಂದು ಗೋಪಾಲನ್ ಬಾಲಚಂದ್ರನ್ ತಿಳಿಸಿದ್ದಾರೆ.

ಬೇರೆ ಯಾವುದೇ ಪೋಷಕರ ರೀತಿಯಲ್ಲೇ ತಾವು ಕಮಲಾ ಹ್ಯಾರಿಸ್ ಗೆ ಉತ್ತೇಜನ ನೀಡಿ ಒಳ್ಳೆಯ ಕೆಲಸ ಮುಂದುವರೆಸುವಂತೆ ಸಲಹೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.

ನಾನು ಡಾಟಾಗಳನ್ನು ಅಧ್ಯಯನ ಮಾಡಿದ್ದೆ. ಆಕೆ ಗೆಲ್ಲುತ್ತಾಳೆ ಎಂಬುದು ನನಗೆ ತಿಳಿದಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಆತಂಕ ಇರಲಿಲ್ಲ ಆದರೆ ಅಂತಿಮ ಫಲಿತಾಂಶ ಬಂದ ನಂತರವಷ್ಟೇ ನೆಮ್ಮದಿಯಿಂದ ನಿದ್ದೆ ಮಾಡುವಂತಾಯಿತು ಎಂದು ಬಾಲಚಂದ್ರನ್ ಹೇಳಿದ್ದಾರೆ. 

ಜೋ ಬೈಡನ್ ಹಾಗೂ ಕಮಲ ಹ್ಯಾರಿಸ್ ತಂಡದಿಂದ ಭಾರಿ ನಿರೀಕ್ಷೆ ಇದೆ. ಅಮೆರಿಕಾದಲ್ಲಿ ಮಧ್ಯರಾತ್ರಿವರೆಗೂ ಜನ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಎಂದು ಬಾಲಚಂದ್ರನ್ ಹೇಳಿದ್ದಾರೆ.

ಟ್ರಂಪ್ ಸರ್ಕಾರದ ಅವಧಿಯಲ್ಲಿ ಹಾಳಾಗಿದ್ದ ಹಲವು ಅಂತಾರಾಷ್ಟ್ರೀಯ ಬಾಂಧವ್ಯಗಳನ್ನು ಜೋ ಬೈಡನ್ ಗೆಲುವು ಮರುನಿರ್ಮಾಣ ಮಾಡಲಿದೆ ಎಂದು ಬಾಲಚಂದ್ರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

SCROLL FOR NEXT