ವಿದೇಶ

ಕಮಲಾ ಹ್ಯಾರಿಸ್ ಗೆ ಪತಿ ಡಗ್ಲಾಸ್ ಭಾವನಾತ್ಮಕ ಪೋಸ್ಟ್!

Lingaraj Badiger

ವಾಷಿಂಗ್ಟನ್: ವಿಶ್ವದ “ದೊಡ್ಡಣ್ಣ” ಅಮೆರಿಕದಲ್ಲಿ ಹೊಸ ಇತಿಹಾಸ ನಿರ್ಮಿಸಿರುವ ಭಾರತೀಯ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಯ ಪ್ರವಾಹವೇ ಹರಿಯುತ್ತಿದೆ.

ಭಾರತ -ಜಮೈಕಾ ಮೂಲದ ಕಮಲಾ ಹ್ಯಾರಿಸ್ ಅಮೆರಿಕಾದ ಮೊದಲ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಸಂದರ್ಭದಲ್ಲಿ, ಭಾರತೀಯರೊಂದಿಗೆ, ಜಮೈಕಾ ಜನರು ತಮ್ಮ ಹೆಣ್ಣುಮಗಳ ಸಾಧನೆ ಕಂಡು ಸಂತಸ ಪಟ್ಟು ಅಭಿನಂದಿಸುತ್ತಿದ್ದಾರೆ.

ಅದೇ ರೀತಿ “ಸೆಕೆಂಡ್ ಜಂಟಲ್ಮನ್” ಸ್ಥಾನಮಾನ ಹೊಂದಲಿರುವ ಕಮಲಾ ಹ್ಯಾರಿಸ್ ಅವರ ಪತಿ ಡಗ್ಲಾಸ್ ಎಮಾಫ್‌ ಅವರಿಗೂ ಶುಭಾಶಯ ಕೋರುತ್ತಿದ್ದಾರೆ. ಈ ಕ್ರಮದಲ್ಲಿ ಡಗ್ಲಾಸ್ ಹಂಚಿಕೊಂಡ ಫೋಟೋ ಪ್ರಸ್ತುತ ನೆಟಿಜನ್‌ಗಳನ್ನು ಮೆಚ್ಚಿಸುತ್ತಿದೆ. ಅಟಾರ್ನಿ ಜನರಲ್, ಸೆನೆಟರ್ ಆಗಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ ಪತ್ನಿ ಹ್ಯಾರಿಸ್ ಈಗ ದೇಶದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಎತ್ತರದ ಶಿಖರ ಏರಿರುವುದಕ್ಕೆ ತಮಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ ಎಂದು ಅವರು ಸಂತೋಷಪಟ್ಟಿದ್ದಾರೆ.

ಈ ಸಂಬಂಧ ಕಮಲಾ ಹ್ಯಾರಿಸ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಡಗ್ಲಾಸ್ ಹಂಚಿಕೊಂಡಿದ್ದು, "ನಿನ್ನನ್ನು ನೋಡಿ ನನ್ನಲ್ಲಿ ಹೆಮ್ಮೆ ಮೂಡಿದೆ” ಎಂಬ ಭಾವನಾತ್ಮಕ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟಿಜನ್‌ಗಳು, ಇಡೀ ಅಮೆರಿಕ ಕಮಲಾ ಹ್ಯಾರಿಸ್ ಬಗ್ಗೆ ಹೆಮ್ಮೆಪಡುತ್ತದೆ. ಒಬ್ಬ ಮಹಿಳೆಯಾಗಿ, ಅದರಲ್ಲೂ ಕಪ್ಪು ಮಹಿಳೆಯಾಗಿ ಅವರ ಯಶಸ್ಸು ಅನೇಕರಿಗೆ ಸ್ಪೂರ್ತಿದಾಯಕವಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. 

ಡೆಮಾಕ್ರಟಿಕ್ ಪಕ್ಷದ ಪ್ರಮುಖ ನಾಯಕಿಯಾಗಿ ಮಹಿಳಾ ಒಬಾಮ ಎಂದು ಜನಪ್ರಿಯವಾಗಿರುವ ಕಮಲಾ ಹ್ಯಾರಿಸ್ ತಮ್ಮ ಸಹ ವಕೀಲ ಡಗ್ಲಾಸ್ ಎಮಾಫ್ ಅವರನ್ನು ವಿವಾಹವಾಗಿದ್ದರು. ಡಗ್ಲಾಸ್ ಅವರ ಮೊದಲ ಪತ್ನಿಯ ಇಬ್ಬರು ಹೆಣ್ಣು ಮಕ್ಕಳಿಗೆ ಹ್ಯಾರಿಸ್ ತಾಯಿಯ ಪ್ರೀತಿ ಹಂಚುತ್ತಿದ್ದಾರೆ.

ಜೋ ಬೈಡನ್ ಅವರು ತಮ್ಮನ್ನು ಉಪಾಧ್ಯಕ್ಷೆ ಅಭ್ಯರ್ಥಿ ಎಂದು ಘೋಷಿಸಿದ ನಂತರ ಕಮಲಾ ಹ್ಯಾರಿಸ್ ಅವರು ಮೊದಲ ಭಾಷಣದಲ್ಲಿಯೇ ತಮ್ಮ ಕುಟುಂಬವನ್ನು ಜಗತ್ತಿಗೆ ಪರಿಚಯಿಸಿದ್ದರು. ನನ್ನ ಪತಿ ಡಗ್ಲಾಸ್, ನಮಗೆ ರತ್ನದಂತಹ ಹೆಣ್ಣು ಮಕ್ಕಳಾದ ಎಲಾ, ಕೋಲ್ ಇದ್ದಾರೆ ಎಂದು ಕುಟುಂಬವನ್ನು ಪರಿಚಯಿಸಿದ್ದರು.

SCROLL FOR NEXT