ವಿದೇಶ

ಹೊಸ ಹೆಚ್-1 ಬಿ ವೀಸಾ ನಿಯಮಗಳಿಂದ ಅಮೆರಿಕ ಆರ್ಥಿಕತೆ, ಉದ್ಯೋಗಕ್ಕೆ ಹಾನಿ: ನಾಸ್ಕಾಮ್

Srinivas Rao BV

ನವದೆಹಲಿ: ಅಮೆರಿಕದ ಹೊಸ ಹೆಚ್-1 ಬಿ ವೀಸಾ ನಿಯಮಗಳನ್ನು ಸಾಫ್ಟ್ ವೇರ್ ಹಾಗೂ ಸೇವೆಗಳ ಕಂಪನಿಗಳ ರಾಷ್ಟ್ರೀಯ ಸಂಘಟನೆ (ನಾಸ್ಕಾಮ್) ಕಟುವಾಗಿ ವಿಮರ್ಶಿಸಿದೆ. 

ಹೊಸ ನಿಯಮಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಸ್ಕಾಮ್, ಇದರಿಂದಾಗಿ ಅಮೆರಿಕಾದ ಆರ್ಥಿಕತೆ ಹಾಗೂ ಉದ್ಯೋಗಗಳಿಗೆ ಹಾನಿಯುಂಟಾಗಲಿದೆ ಎಂದು ವಿಶ್ಲೇಷಿಸಿದೆ. 

ಹೆಚ್ಚು ಕುಶಲತೆ ಹೊಂದಿರುವ ಪ್ರತಿಭೆಗಳು ಅಮೆರಿಕ ಪ್ರವೇಶಿಸುವುದಕ್ಕೆ ಈ ಹೊಸ ನಿಯಮಗಳು ನಿರ್ಬಂಧ ವಿಧಿಸುತ್ತದೆ ಎಂದು ನಾಸ್ಕಾಮ್ ಹೇಳಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕದ ಉದ್ಯೋಗಿಗಳ ಹಿತಾಸಕ್ತಿಗಾಗಿ ಭದ್ರತೆ ಒದಗಿಸಲು, ಹೆಚ್-1 ಬಿ ವಲಸಿಗಯೇತರ ವೀಸಾ ಯೋಜನೆಗಳಿಗೆ ಸಂಬಂಧಿಸಿದಂತೆ ಹೊಸ ನಿರ್ಬಂಧಗಳನ್ನು ಘೋಷಿಸಿತ್ತು.

ಅಮೆರಿಕಾದ ಉದ್ಯೋಗಿಗಳನ್ನು ರಕ್ಷಿಸುವುದಕ್ಕಾಗಿ ಹಾಗೂ ಅರ್ಹತೆ ಇರುವವರ ಹೆಚ್-1 ಬಿ ಅರ್ಜಿಗಳನ್ನು ಅನುಮೋದಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಆಡಳಿತ ತಿಳಿಸಿತ್ತು. ಆದರೆ ಇದರಿಂದಾಗಿ ಐಟಿ ವೃತ್ತಿಯಲ್ಲಿರುವ ಭಾರತದ ಸಾವಿರಾರು ಜನರ ಮೇಲೆ ಪರಿಣಾಮ ಬೀರಲಿದೆ. 

ಆದರೆ ನಾಸ್ಕಾಮ್ ಪ್ರಕಾರ ಈ ಬದಲಾವಣೆಗಳು ಪ್ರತಿಭೆಗಳನ್ನು ನಿರ್ಬಂಧಿಸುವ ಕೆಲಸ ಮಾಡಲಿದ್ದು, ತತ್ಪರಿಣಾಮ ಅಮೆರಿಕಾದ ಆರ್ಥಿಕತೆಗೆ ಅಪಾಯತಂದೊಡ್ಡಲಿದೆ ಅಮೆರಿಕಾದ ಉದ್ಯೋಗಗಳಿಗೂ ಹಾನಿಯುಂಟಾಗಲಿದ್ದು, ಅಮೆರಿಕಾದ ಹಿತಾಸಕ್ತಿಯನ್ನು ಅಪಾಯಕ್ಕೆ ಸಿಲುಕಿಸಲಿದೆ ಎಂದು ಹೇಳಿದೆ. ಅಮೆರಿಕಾದ ಮಾರುಕಟ್ಟೆಗೆ ಕುಶಲತೆ ಹೊಂದಿರುವ ಪ್ರತಿಭೆಗಳ ಪ್ರವೇಶ ಲಭ್ಯತೆ ಇರುವುದು ಕೋವಿಡ್-19 ಸಂದರ್ಭದಲ್ಲಿ ಬಹುಮುಖ್ಯವಾಗಿದೆ ಎಂದು ನಾಸ್ಕಾಮ್ ಅಭಿಪ್ರಾಯಪಟ್ಟಿದೆ.

SCROLL FOR NEXT