ವಿದೇಶ

ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಟ್ರಂಪ್ ಅವರನ್ನೇ ಮರು ಆಯ್ಕೆ ಮಾಡಿ: ಭಾರತೀಯ ಅಮೆರಿಕನ್ನರು

Sumana Upadhyaya

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಉತ್ತಮ ಸ್ನೇಹಿತ ಎಂದು ಬಣ್ಣಿಸಿರುವ ಭಾರತ ಮೂಲಕ ಅಮೆರಿಕನ್ನರು, ದೇಶಾದ್ಯಂತ ಇರುವ ಭಾರತೀಯರು ನವೆಂಬರ್ 3ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಬೇಕು ಎಂದಿದ್ದಾರೆ.

ಭಾರತೀಯ ಅಮೆರಿಕನ್ ಫೈನಾನ್ಸ್ ಸಮಿತಿಯ ಅಲ್ ಮಸನ್, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಅಮೆರಿಕನ್ನರು ಶಕ್ತಿಯಾಗಿ ಹೊರಹೊಮ್ಮಿದ್ದಾರೆ, ನಿಮ್ಮ ಕೊಡುಗೆ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಸಹಾಯವಾಗುತ್ತದೆ ಎಂದರು.

ಇದೊಂದು ಐತಿಹಾಸಿಕ ಚುನಾವಣೆಯಾಗಿದ್ದು ಇಲ್ಲಿ ನಾವೆಲ್ಲರೂ ಸರಳ ಆಯ್ಕೆಯನ್ನು ಮಾಡಿಕೊಳ್ಳಬೇಕು. ನಮಗೆ ಉತ್ತಮ ಆರ್ಥಿಕತೆ, ಕಡಿಮೆ ಬಡ್ಡಿದರ ಮತ್ತು ಸಣ್ಣ ಸರ್ಕಾರ ಬೇಕೆ, ಹಾಗಿದ್ದಲ್ಲಿ ಯಾಕೆ ಟ್ರಂಪ್ ಅವರನ್ನೇ ಮರು ಆಯ್ಕೆ ಮಾಡಬಾರದು, ಭಾರತಕ್ಕೆ ಉತ್ತಮ ಸ್ನೇಹಿತ ಬೇಕೆಂದರೆ ಟ್ರಂಪ್ ಅವರನ್ನು ಆಯ್ಕೆ ಮಾಡೋಣ ಎಂದು ಭಾರತ ಮೂಲದ ಖ್ಯಾತ ಉದ್ಯಮಿ ಚಿಂಟು ಪಟೇಲ್ ಹೇಳಿದ್ದಾರೆ.

ಚೀನಾ ನೀಡಿರುವ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಟ್ರಂಪ್ ಅವರೇ ಮರು ಆಯ್ಕೆಯಾಗಿ ಅಧ್ಯಕ್ಷರಾಗಿ ಬರಬೇಕು. ನಾವು ಇಲ್ಲಿ ಸಣ್ಣ ಸಂಖ್ಯೆಯಲ್ಲಿ ಇರಬಹುದು, ಆದರೆ ನಾವು ಡಾಲರ್ ಗಳಲ್ಲಿ ಲೆಕ್ಕ ಹಾಕುವುದಾದರೆ ಶಕ್ತಿಯುತವಾಗಿದ್ದೇವೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ನಮ್ಮ ಮತವನ್ನು ಡೊನಾಲ್ಡ್ ಟ್ರಂಪ್ ಅವರಿಗೇ ಹಾಕೋಣ, ನಮ್ಮ ದೇಶವನ್ನು ನಾವು ಹಿಂದಕ್ಕೆ ತೆಗೆದುಕೊಂಡು ಹೋಗುವುದು ಬೇಡ, ಮುಂದಕ್ಕೆ ತೆಗೆದುಕೊಂಡು ಹೋಗೋಣ ಎಂದು ಪಟೇಲ್ ಭಾರತೀಯ ಸಮುದಾಯಕ್ಕೆ ಕರೆ ನೀಡಿದರು.

ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಭಾರತೀಯ ಅಮೆರಿಕನ್ನರ ಪರವಾಗಿ ಕೆಲಸ ಮಾಡುತ್ತಿರುವ ಡಾ ರಾಜ್ ಭಯಾನಿ, ಕಳೆದ ನಾಲ್ಕು ವರ್ಷಗಳಲ್ಲಿ ಚೀನಾ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತದ ಪರವಾಗಿ ಬೆಂಬಲ ಸೂಚಿಸಿದ ಟ್ರಂಪ್ ಅವರನ್ನು ಮರು ಆಯ್ಕೆ ಮಾಡುವುದು ಭಾರತೀಯರಿಗೆ ಮುಖ್ಯವಾಗಿದೆ ಎಂದರು.

ಇಂಡಿಯನ್ ವಾಯ್ಸ್ ಫಾರ್ ಟ್ರಂಪ್ ಸದಸ್ಯ ಶ್ರೀಧರ್ ಚಿತ್ಯಾಲ, ಕಳೆದ ನಾಲ್ಕು ವರ್ಷಗಳಲ್ಲಿನ ಟ್ರಂಪ್ ಅವರ ಆಡಳಿತ ನೀತಿಗಳು ಗಟ್ಟಿಯಾದ, ಯಾವುದೇ ಅಡೆತಡೆಗಳಿಲ್ಲದೆ, ರೂಪಾಂತರ ಹೊಂದುವಂತಿದ್ದವು. ಚೀನಾ ವಿಚಾರದಲ್ಲಿ, ಭಾರತದ ಪರ ಎಂಬ ಬಲವಾದ ಸಂದೇಶವನ್ನು ಟ್ರಂಪ್ ಕಳುಹಿಸಿದ್ದಾರೆ. ಅವರ ಮರು ಆಯ್ಕೆಯನ್ನು ನಾವು ಬಯಸುತ್ತೇವೆ ಎಂದರು.

ಉದ್ಯಮಿ ನವೀನ್ ಶಾ, ಟ್ರಂಪ್ ಅವರು ಕೊರೋನಾ ವೈರಸ್ ನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎನ್ನುತ್ತಾರೆ. ಅಮೆರಿಕವನ್ನು ಶಾಂತಿ ಮತ್ತು ಸೌಹಾರ್ದತೆಯತ್ತ ಮತ್ತು ಆರ್ಥಿಕತೆಯಲ್ಲಿ ಉತ್ತಮ ಸಾಧನೆ ಮಾಡಲು ಅಧ್ಯಕ್ಷ ಟ್ರಂಪ್ ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂದರು.

SCROLL FOR NEXT