ವಿದೇಶ

ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕದಿಂದ ಸಕಲ ನೆರವು: ಕನ್ನಡದಲ್ಲಿ ಟ್ವೀಟ್ ಮಾಡಿದ ರಾಯಭಾರ ಕಚೇರಿ

Srinivasamurthy VN

ನವದೆಹಲಿ: ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗುತ್ತಿರುವ ಭಾರತಕ್ಕೆ ಅಮೆರಿಕ ಸರ್ಕಾರ ಸಕಲ ನೆರವು ನೀಡಲು ಸಿದ್ಧ ಎಂದು ಅಮೆರಿಕ ರಾಯಭಾರ ಕಚೇರಿ ಕನ್ನಡದಲ್ಲಿ ಟ್ವೀಟ್ ಮಾಡಿದೆ.

ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಟ್ವೀಟ್ ಮಾಡಿದ್ದು, ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ಮಲಯಾಳಂನಲ್ಲಿ ಟ್ವೀಟ್ ಮಾಡಿದೆ.

'ಭಾರತದಲ್ಲಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಎಲ್ಲ ರೀತಿಯ ನೆರವು ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅಮೆರಿಕದ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವಾನ್‌, 'ಭಾರತದಲ್ಲಿ ಕೋವಿಡ್‌ ಸಾಂಕ್ರಾಮಿಕ ತೀವ್ರವಾಗಿರುವ ಬಗ್ಗೆ ಅಮೆರಿಕ ಕಳಕಳಿ ಹೊಂದಿದೆ. ಸಾಂಕ್ರಾಮಿಕದ ವಿರುದ್ಧ ಹೋರಾಡುವಾಗ ಭಾರತದ ನಮ್ಮ ಸ್ನೇಹಿತರು ಮತ್ತು ಸಹಭಾಗಿಗಳಿಗೆ ಹೆಚ್ಚಿನ ಸಾಮಗ್ರಿಗಳು ಮತ್ತು ಅಗತ್ಯ ಬೆಂಬಲ ನೀಡಲು ಶ್ರಮಿಸುತ್ತಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ.  

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‌ ಸಹ ಭಾರತದ ಕೋವಿಡ್‌ ಸ್ಥಿತಿಯ ಬಗ್ಗೆ ಟ್ವೀಟ್ ಮಾಡಿದ್ದು, 'ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಭಾರತ ಸರ್ಕಾರದೊಂದಿಗೆ ಕೈಜೋಡಿಸಿ ನಿಕಟ ಬೆಂಬಲ ನೀಡುತ್ತಿದ್ದೇವೆ. ಭಾರತದ ನಾಗರಿಕರು ಮತ್ತು ಆರೋಗ್ಯ ಕ್ಷೇತ್ರದ ಹೋರಾಟಗಾರರಿಗೆ ಹೆಚ್ಚುವರಿ ಬೆಂಬಲವನ್ನು ಕ್ಷಿಪ್ರವಾಗಿ ನಿಯೋಜಿಸುತ್ತೇವೆ' ಎಂದು ಹೇಳಿದ್ದಾರೆ. 
 

SCROLL FOR NEXT