ವಿದೇಶ

ಹವಾಮಾನ ಬಿಕ್ಕಟ್ಟಿನ ಪರಿಣಾಮ: ಅಪಾಯದಲ್ಲಿದ್ದಾರೆ ಭಾರತದ ಮಕ್ಕಳು! 

Srinivas Rao BV

ನವದೆಹಲಿ: ಹವಾಮಾನ ಬಿಕ್ಕಟ್ಟಿನ ಪರಿಣಾಮ ಭಾರತ, ಏಷ್ಯಾ ರಾಷ್ಟ್ರಗಳ ಮಕ್ಕಳು ಅತಿ ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ ಎಂದು ಯುನಿಸೆಫ್ ವರದಿಯ ಮೂಲಕ ತಿಳಿದುಬಂದಿದೆ. 

ಹವಾಮಾನ ವೈಪರಿತ್ಯ ಈ ಪ್ರದೇಶಗಳ ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ, ರಕ್ಷಣೆಗೆ ಬೆದರಿಕೆ ಉಂಟುಮಾಡುತ್ತಿದೆ ಎಂದು ವರದಿಯಲ್ಲಿ ಯುನಿಸೆಫ್ ಎಚ್ಚರಿಸಿದೆ.

"ಹವಾಮಾನ ಬಿಕ್ಕಟ್ಟು ಮಕ್ಕಳ ಹಕ್ಕುಗಳ ಬಿಕ್ಕಟ್ಟು; ಮಕ್ಕಳ ಹವಾಮಾನ ಅಪಾಯ ಸೂಚ್ಯಂಕದ ಪರಿಚಯ(ಸಿಸಿಆರ್ ಐ) ಯುನಿಸೆಫ್  ಮಕ್ಕಳ ಮೇಲೆ ಕೇಂದ್ರೀಕರಿಸಿದ ಮೊದಲ ವರದಿಯಾಗಿದ್ದು, ಭಾರತ, ಏಷ್ಯಾ ರಾಷ್ಟ್ರಗಳಲ್ಲಿ ಚಂಡಮಾರುತ, ಉಷ್ಣಗಾಳಿ ರೀತಿಯ ಪರಿಸರ ವೈಪರಿತ್ಯಗಳಿಗೆ ಮಕ್ಕಳು ಎದುರಾಗುವುದು ಹಾಗೂ ಅವರಿಗೆ ಅಗತ್ಯ ಸೇವೆಗಳ ಲಭ್ಯತೆಯ ಕುರಿತು ಅಧ್ಯಯನ ನಡೆಸಿರುವ ಈ ವರದಿ ಹೆಚ್ಚು ಅಪಾಯ ಎದುರಿಸುತ್ತಿರುವ  ಶ್ರೇಯಾಂಕದ ಆಧಾರದಲ್ಲಿ ರಾಷ್ಟ್ರಗಳ ಪಟ್ಟಿಯನ್ನು ಪ್ರಕಟಿಸಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಭಾರತ ಮಕ್ಕಳ ಮೇಲೆ ಹವಾಮಾನ ಬಿಕ್ಕಟ್ಟಿನ ಪರಿಣಾಮಗಳ ಅಪಾಯವನ್ನು ಅತಿ ಹೆಚ್ಚಾಗಿ ಎದುರಿಸುತ್ತಿರುವ ರಾಷ್ಟ್ರಗಳಾಗಿದ್ದು, ಅನುಕ್ರಮವಾಗಿ 14, 15, 25, 26 ನೇ ಸ್ಥಾನಗಳಲ್ಲಿವೆ.

ಪ್ರವಾಹ ಹಾಗೂ ವಾಯುಮಾಲಿನ್ಯದಿಂದ ನಿರಂತರ ಪರಿಸರ ಆಘಾತಗಳ ಮೂಲಕ ಮಹಿಳೆಯರು ಹಾಗೂ ಮಕ್ಕಳು ಅತಿ ಹೆಚ್ಚು ಅಪಾಯ ಎದುರಿಸುತ್ತಿರುವ 33 ದೇಶಗಳ ಪಟ್ಟಿಯಲ್ಲಿ ಭಾರತವನ್ನೂ ಸಹ ಸಿಸಿಆರ್ ಐ ಸೇರಿಸಿದೆ. ಈ 33 ರಾಷ್ಟ್ರಗಳಲ್ಲಿ 1 ಬಿಲಿಯನ್ ಮಕ್ಕಳು ಜೀವಿಸುತ್ತಿದ್ದು, ಅತ್ಯಂತ ಹೆಚ್ಚಿನ ಅಪಾಯ ಎಂದು ವರದಿಯಲ್ಲಿ ಹೇಳಲಾಗಿದೆ.

SCROLL FOR NEXT