ವಿದೇಶ

ಉಗ್ರ ಸಂಘಟನೆಗಳ ನಂಟು ಕುರಿತು ಮೌನ ತಾಳಿದ ತಾಲಿಬಾನ್: ಅಫ್ಘಾನಿಸ್ತಾನದ ಬೆಳವಣಿಗೆಳು ಜಾಗತಿಕ ಭದ್ರತೆಗೆ ಸವಾಲು!

Manjula VN

ಕಾಬುಲ್: 20 ವರ್ಷಗಳ ನಂತರ ಅಫ್ಘಾನಿಸ್ಥಾನ ರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಉಗ್ರ ಸಂಘಟನೆ, ಅಲ್-ಖೈದಾ ದಂತಹ ಭಯೋತ್ಪಾದಕ ಸಂಘಟನೆಗಳೊಂದಿನ ನಂಟು ಹೊಂದಿರುವ ಕುರಿತು ಮೌನ ತಾಳಿರುವ ಬೆಳವಣಿಗೆಯು ಜಾಗತಿಕ ಭದ್ರತೆಗೆ ಸವಾಲೊಡ್ಡಿದಂತಾಗಿದೆ. 

ಅಫ್ಘಾನಿಸ್ಥಾನ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ತಾಲಿಬಾನ್ ಉಗ್ರರು ಕೆಲ ದಿನಗಳ ಹಿಂದಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದರು. 

ಈ ವೇಳೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಮಹಿಳೆಯರು ಹಾಗೂ ಮಾನವ ಹಕ್ಕುಗಳಿಗೆ ಗೌರವ ನೀಡುವುದಾಗಿ ತಿಳಿಸಿದ್ದರು. ಆದರೆ, ಉಗ್ರ ಸಂಘಟನೆಗಳೊಂದಿಗಿನ ನಂಟು ಕುರಿತು, ಸ್ಥಳೀಯ ಉಗ್ರ ಸಂಘಟನೆಗಳ ನಂಟು ಕುರಿತ ಮೌನ ತಾಳಿದ್ದರು. ಈ ಬೆಳವಣಿಗೆ ಇದೀಗ ಇಡೀ ವಿಶ್ವವನ್ನು ಚಿಂತೆಗೀಡಾಗುವಂತೆ ಮಾಡಿದೆ. 

ತಾಲಿಬಾನ್‌ಗಳು ಅಲ್-ಖೈದಾ ಉಗ್ರ ಸಂಘಟನೆ ಜೊತೆಗೆ ಸುಮಾರು ಎರಡು ದಶಕಗಳಿಗಿಂತಲೂ ಹಳೆಯ ಸಂಬಂಧವನ್ನು ಹೊಂದಿದೆ. ಇದಲ್ಲದೆ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಇ-ತೊಯ್ಬಾ ಮತ್ತು ಜಮಾತ್-ಉದ್-ದವಾ ಉಗ್ರ ಸಂಘಟನೆಗಳೊಂದಿಗೂ ನಂಟು ಹೊಂದಿದೆ.

ಇದೀಗ ಅಫ್ಘಾನಿಸ್ತಾನದಲ್ಲಿ ಅಧಿಕಾರ ಸ್ಥಾಪನೆ ಮಾಡಲು ಮುಂದಾಗಿರುವ ತಾಲಿಬಾನ್ ಉಗ್ರರು ಈ ಉಗ್ರ ಸಂಘಟನೆಗಳೊಂದಿಗಿನ ತನ್ನ ನಂಟನ್ನು ಮುಂದವರೆಸುತ್ತದೆಯೋ, ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ ಈ ಬೆಳವಣಿಗೆಯು ಕಳವಳಕ್ಕೆ ಎಡೆಮಾಡಿಕೊಟ್ಟಿದೆ. 

ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದಕ ಗುಂಪುಗಳೊಂದಿಗೆ ತಾಲಿಬಾನ್ ತನ್ನ ಸಂಬಂಧವನ್ನು ಎಂದಿಗೂ ದೃಢಪಡಿಸಿರಲಿಲ್ಲ. ಆದರೆ 2019 ರ ದೋಹಾ ಒಪ್ಪಂದದ ಬಳಿಕ ಅಮೆರಿಕಾ ವಿರುದ್ಧ ದಾಳಿಗೆ ಯೋಜಿಸಲು ಅಫ್ಘಾನಿಸ್ತಾನ ರಾಷ್ಟ್ರವನ್ನು ಅಡಿಪಾಯವಾಗಿ ಮಾಡಿಕೊಳ್ಳಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂಬುದನ್ನು ಒಮ್ಮತದ ಸಹಿ ಮೂಲಕ ವ್ಯಕ್ತಪಡಿಸುವಾಗ ಎಲ್ಲಾ ಪರಿಸ್ಥಿತಿಗಳೂ ಬದಲಾಗಿತ್ತು ಎಂದು ನ್ಯೂಸ್ ವೆಬ್'ಸೈಟ್ ಇನ್ಸೈಡ್ಓವರ್ ಹೇಳಿದೆ.

ತಾಲಿಬಾನ್‌ಗಳು ಕೂಡ ಉಗ್ರರೆಂದೇ ವಿಶ್ವ ಪರಿಗಣಿಸಿದೆ. 1994ರಲ್ಲಿ ತಾಲಿಬಾನ್ ಪ್ರಾರಂಭವಾಗಿದ್ದು, ಇದಾಗಿ ಎರಡೇ ವರ್ಷದಲ್ಲಿ ಅಫ್ಘಾನ್‌ನಲ್ಲಿ  ತಾಲಿಬಾನ್ ಆಳ್ವಿಕೆಗೆ ಬಂದಿತ್ತು. 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಆಳ್ವಿಕೆ ಮಾಡಿದರು. ಷರಿಯಾ ಕಾನೂನು ಜಾರಿಗೆ ತರುವ ಮೂಲಕ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಶಾಂತಿ ಹಾಗೂ ಭದ್ರತೆ ಕಾಪಾಡುವುದು ತಾಲಿಬಾನ್‌ಗಳ ಏಕೈಕ ಗುರಿ. ಇಲ್ಲಿ ಜನರು ಬದುಕಬೇಕಾದರೆ ಜಾರಿ ಮಾಡಿರುವ ಕಠಿಣ ಕಾನೂನುಗಳನ್ನು ಪಾಲಿಸಲೇಬೇಕಿತ್ತು. ಹತ್ತು ವರ್ಷ ತುಂಬಿದ ನಂತರ ಮಹಿಳೆಯರು ಶಿಕ್ಷಣ ಪಡೆಯಬಾರದು. ಟಿ.ವಿ. ನೋಡಬಾರದು, ಸಾಮಾಜಿಕ ಜಾಲತಾಣ ಬಳಸಲೇಬಾರದು ಎಂಬುದು ತಾಲಿಬಾನಿಗಳು ಜಾರಿಗೊಳಿಸಿರುವ ನಿಯಮಗಳ ಮಾದರಿ. 

ತಾಲಿಬಾನ್ ಒಂದು ಗುಂಪು ಅಲ್ಲ. ಇಂತಹ ಅನೇಕ ಗುಂಪುಗಳಿವೆ. ಪಾಕಿಸ್ತಾನದಲ್ಲಿ ಕೂಡ ತಾಲಿಬಾನ್ ತನ್ನ ಪ್ರಾಬಲ್ಯ ಹೊಂದಿದೆ. ಷರಿಯಾ ಕಾನೂನು ಉಲ್ಲಂಘಿಸಿ ಶಾಲೆಗೆ ಹೋಗಿದ್ದನ್ನು ವಿರೋಧಿಸಿ ಮಲಾಲ ಯೂಸುಫ್‌ರನ್ನು ಕೊಲ್ಲಲು ಯತ್ನಿಸಿದ್ದು ಇದೇ ತಾಲಿಬಾನಿಗಳೇ. 

ಇದೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತೆ ಅಧಿಕಾರ ಪಡೆದುಕೊಂಡ ಹಿನ್ನೆಲೆಯಲ್ಲಿ ಉಗ್ರರಿಗೆ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಇಡೀ ವಿಶ್ವಕ್ಕೆ ಈ ಬೆಳವಣಿಗೆ ಕಂಟಕವಾಗಿ ಪರಿಣಮಿಸಿದೆ. 

SCROLL FOR NEXT