ವಿದೇಶ

ತಾಲಿಬಾನಿಗಳ ದಾಳಿ ಭೀತಿ, ಗುರಿ ತಪ್ಪಿಸಲು ಟೇಕ್ ಆಫ್ ವೇಳೆ ಬೆಂಕಿ ಉಗುಳುತ್ತಿವೆ ವಿಮಾನಗಳು!

Srinivasamurthy VN

ಕಾಬೂಲ್: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಂತ್ರಸ್ಥರ ಏರ್ ಲಿಫ್ಟ್ ಕಾರ್ಯಾಚರಣೆ ಭರದಿಂದ ಸಾಗಿರುವಂತೆಯೇ ಇತ್ತ ತಾಲಿಬಾನಿಗಳ ಭೀತಿ ಕೂಡ ಆವರಿಸಿದೆ.

ಹೌದು.. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಹೇರುತ್ತಿದ್ದಂತೆಯೇ ಇತ್ತ ಆಫ್ಘನ್ ತೊರೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದರ ನಡುವೆಯೇ ಅಮೆರಿಕ, ಲಂಡನ್ ಮತ್ತು ಭಾರತ ಸೇರಿದಂತೆ ಹಲವು ದೇಶಗಳು ಏರ್ ಲಿಫ್ಟ್ ಕಾರ್ಯಾಚರಣೆಯಲ್ಲಿ ತೊಡಗಿವೆ. 

ಇದರ ನಡುವೆಯೇ ಕಾಬೂಲ್ ಏರ್ ಪೋರ್ಟ್ ಸುತ್ತಮುತ್ತ ತಾಲಿಬಾನಿ ಪಡೆ ನೆರೆದಿದ್ದು, ಇದು ಏರ್ ಲಿಫ್ಟ್ ನಲ್ಲಿ ತೊಡಗಿರುವ ವಿವಿಧ ದೇಶಗಳ ಸೈನಿಕರಿಗೆ ಹೊಸ ತಲೆನೋವು ತಂದಿದೆ. ವಿಮಾನ ನಿಲ್ದಾಣ ಸುತ್ತುವರೆದಿರುವ ತಾಲಿಬಾನಿಗಳು ವಿಮಾನಗಳ ಮೇಲೆ ದಾಳಿ ಮಾಡುವ ಭೀತಿ ಇದೆ. ಹೀಗಾಗಿ ಯುದ್ಧ ವಿಮಾನಗಳು ಟೇಕ್ ಆಫ್ ಆಗುವ ವೇಳೆ ಬೆಂಕಿ ಉಗುಳುತ್ತಿದ್ದು, ಆ ಮೂಲಕ ಒಂದು ವೇಳೆ ತಾಲಿಬಾನಿಗಳು ವಿಮಾನವನ್ನು ಗುರಿಯಾಗಿಸಿಕೊಂಡಿದ್ದರೆ ಅವರ ಗುರಿ ತಪ್ಪಿಸಲು ಸೇನೆ ಈ ರೀತಿಯ ತಂತ್ರಗಾರಿಕೆ ಮಾಡುತ್ತಿದೆ ಎನ್ನಲಾಗಿದೆ.

ಫ್ರಾನ್ಸ್ ಸೇನೆಯ ಎ400ಎಂ ಯುದ್ಧ ವಿಮಾನ ಟೇಕ್ ಆಫ್ ಆಗುವ ವೇಳೆ ಬೆಂಕಿ ಉಗುಳಿದ್ದು, ದಾಳಿ ಮಾಡಿದರೆ ತಕ್ಕಶಾಸ್ತ್ರಿ ಮಾಡುವುದಾಗಿ ಈ ಮೂಲಕ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದೆ.

ಹೈ ಅಲರ್ಟ್ ಘೋಷಿಸಿದ ಅಮೆರಿಕ
ಇನ್ನು ಕಾಬೂಲ್ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಅಮೆರಿಕ ಕೂಡ ತನ್ನ ಸೈನಿಕರಿಗೆ ಸಂಭಾವ್ಯ ದಾಳಿ ಕುರಿತು ಎಚ್ಚರಿಕೆ ನೀಡುತ್ತಿದ್ದು, ಇಸ್ಲಾಮಿಕ್ ಸ್ಟೇಟ್ ಆಫ್ಘನ್ ಘಟಕ ವಿಮಾನ ನಿಲ್ದಾಣ ಮತ್ತು ಅಮೆರಿಕನ್ನರ ಮೇಲೆ ದಾಳಿ ಮಾಡುವ ಸಂಚು ರೂಪಿಸಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅಮೆರಿಕ ಹೈ ಅಲರ್ಟ್ ಘೋಷಣೆ ಮಾಡಿದ್ದು,  ಏರ್ ಪೋರ್ಟ್ ಬಿಟ್ಟುಹೋಗದಂತೆ ಅಮೆರಿಕನ್ನರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಅಮೆರಿಕ ರಕ್ಷಣಾ ಇಲಾಖೆ ಕಾಬೂಲ್ ವಿಮಾನ ನಿಲ್ದಾಣದಾದ್ಯಂತ ಹದ್ದಿನಕಣ್ಣು ಇರಿಸಿದೆ.

SCROLL FOR NEXT