ವಿದೇಶ

ತಾಲಿಬಾನ್ ತೆಕ್ಕೆಗೆ ಆಫ್ಘನ್, ಪಾಕ್ ಗುಪ್ತಚರ ಇಲಾಖೆಯ ಕೈವಾಡ ಎಂದ ಅಮೆರಿಕ

Srinivasamurthy VN

ವಾಷಿಂಗ್ಟನ್: ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಹಿಡಿತ ಸಾಧಿಸುವಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ ಎಂದು ಅಮೆರಿಕ ನಾಯಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಅಮೆರಿಕದ ರಿಪಬ್ಲಿಕನ್ ಸಂಸದ ಸ್ಟೀವ್ ಚಾಬಟ್ ಈ ಹೇಳಿಕೆ ನೀಡಿದ್ದು, ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿರುವುದು ಕ್ರೌರ್ಯಕ್ಕೆ ಕಾರಣವಾಗಲಿದ್ದು, ಇದನ್ನು ಪಾಕಿಸ್ತಾನದಲ್ಲಿ ಸಂಭ್ರಮಿಸುತ್ತಿರುವುದು ಅಸಹ್ಯಕರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ಪಾಕಿಸ್ತಾನ ಮತ್ತು ಅದರ ಗುಪ್ತಚರ ಸೇವೆಗಳು ತಾಲಿಬಾನಿಗಳನ್ನು ಬೆಳೆಸುವಲ್ಲಿ ಮತ್ತು ಅಂತಿಮವಾಗಿ ಅವರು ಅಧಿಕಾರ ವಹಿಸಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ನಮಗೆಲ್ಲರಿಗೂ ತಿಳಿದಿದೆ. ಅಫ್ಗಾನಿಸ್ತಾನದ ಜನರಿಗೆ ಸಂಕಷ್ಟ ತರಬಲ್ಲ ತಾಲಿಬಾನಿಗಳ ಗೆಲುವನ್ನು ಪಾಕಿಸ್ತಾನದ ಅಧಿಕಾರಿಗಳು ಸಂಭ್ರಮಿಸುತ್ತಿರುವುದು ಅಸಹ್ಯಕರ.  ಪಾಕಿಸ್ತಾನವೇ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿದೆ. ಈ ಬಗ್ಗೆ ಅಮೆರಿಕದವರು ಅಷ್ಟಾಗಿ ಗಮನಹರಿಸಿಲ್ಲ. ಈ ದೌರ್ಜನ್ಯಗಳ ಬಗ್ಗೆ ನಮ್ಮ ನಾಗರಿಕರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ. ಅಪಹರಣ, ಇಸ್ಲಾಂಗೆ ಬಲವಂತದ ಮತಾಂತರ, ಸಣ್ಣ ವಯಸ್ಸಿನ ಹಿಂದೂ ಯುವತಿಯರನ್ನು ವಯಸ್ಸಾದ ಮುಸ್ಲಿಮರೊಂದಿಗೆ ಬಲವಂತದಿಂದ ಮದುವೆ ಮಾಡಿಸುವುದು ಇತ್ಯಾದಿ ದೌರ್ಜನ್ಯ ನಡೆಯುತ್ತಿವೆ ಎಂದು ಚಾಬಟ್ ಹೇಳಿದ್ದಾರೆ.

‘ಹಿಂದೂ ರಾಜಕೀಯ ಕಾರ್ಯ ಸಮಿತಿ’ಯ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಇದೇ ವೇಳೆ, ಅಫ್ಗಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರನ್ನು ಸ್ವಾಗತಿಸುತ್ತಿರುವ ಭಾರತದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
 

SCROLL FOR NEXT